ಹೊಸದಿಲ್ಲಿ: ದೇಶಾದ್ಯಂತ ದಿನೇದಿನೆ ಕೊರೋನಾ ನಿಗ್ರಹವಾಗುತ್ತಿದ್ದು, ಸತತ ಐದನೇ ದಿನವೂ ನಿತ್ಯ ಸೋಂಕಿತರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇದೆ.
ಕಳೆದ 24 ಗಂಟೆಯಲ್ಲಿ 47,905 ಜನರಿಗೆ ಸೋಂಕು ತಗುಲಿದೆ. ಅಲ್ಲದೆ, ದೈನಿಕ ಹೊಸ ಪ್ರಕರಣಗಳಿಗಿಂತಲೂ ಹೆಚ್ಚು ದೈನಿಕ ಹೊಸ ಚೇತರಿಕೆ ಪ್ರವೃತ್ತಿ 40ನೇ ದಿನವೂ ಮುಂದುವರಿದಿದ್ದು, ಇಷ್ಟೇ ಅವಯಲ್ಲಿ 52,718 ಮಂದಿ ಗುಣಮುಖರಾಗಿದ್ದಾರೆ.
ಭಾರತದಲ್ಲಿ ಸಕ್ರಿಯಪ್ರಕರಣಗಳ ಸಂಖ್ಯೆ ಪ್ರಸ್ತುತ 4.98 ಲಕ್ಷವಾಗಿದ್ದು, ಇಳಿಕೆ ಪ್ರವೃತ್ತಿ ಮುಂದುವರಿದಿದೆ. ದೇಶದಲ್ಲಿ ಶೇ.5.63 ರಷ್ಟು ಸಕ್ರಿಯ ಸೋಂಕಿತರಿದ್ದು, ಐದು ಲಕ್ಷಕ್ಕಿಂತ ಸಕ್ರಿಯ ಸೋಂಕಿತರಿದ್ದಾರೆ.
ಚೇತರಿಕೆಯ ಪ್ರವೃತ್ತಿಯೊಂದಿಗೆ ಒಟ್ಟು ಗುಣಮುಖ ದರ ಹೊಸ ಪ್ರಕರಣಗಳಿಗಿಂತಲೂ ಹೆಚ್ಚಾಗಿದೆ. ಅದು ಪ್ರಸ್ತುತ ಶೇ.92.89ರಷ್ಟಿದೆ. ಗುಣಮುಖರ ಒಟ್ಟು ಸಂಖ್ಯೆ 80.5 ಲಕ್ಷ ದಾಟಿದೆ. ಶೇ.78ರಷ್ಟು ಹೊಸ ಚೇತರಿಕೆಯ ಪ್ರಕರಣಗಳು 10 ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿವೆ.
ಮಹಾರಾಷ್ಟ್ರದಲ್ಲಿ ಹೊಸದಾಗಿ 9,164 ಜನರು ಗುಣಮುಖರಾಗಿದ್ದು, ಏಕದಿನದಲ್ಲಿ ಚೇತರಿಕೆಯ ಗರಿಷ್ಠ ಪ್ರಕರಣ ವರದಿಯಾಗಿದೆ. 7,264 ಜನ ದಿಲ್ಲಿಯಲ್ಲಿ ಚೇತರಿಸಿಕೊಂಡಿದ್ದರೆ, ಕೇರಳದಲ್ಲಿ 7,252 ಹೊಸ ಚೇತರಿಕೆ ವರದಿಯಾಗಿದೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.78ರಷ್ಟು ಹೊಸ ಪ್ರಕರಣ ವರದಿಯಾಗಿದೆ. ದಿಲ್ಲಿಯಲ್ಲಿ ಮತ್ತೊಮ್ಮೆ ಸೋಂಕು ಹೆಚ್ಚಳವಾಗಿದ್ದು, ಅತಿ ಹೆಚ್ಚು ದೈನಂದಿನ ಹೊಸ ಪ್ರಕರಣ ವರದಿಯಾಗಿದೆ. ಇದುವರೆಗೆ ಅತಿ ಹೆಚ್ಚಿನ ದೈನಂದಿನ ಹೊಸಪ್ರಕರಣ 8,593 ದಾಖಲಿಸಿದೆ. ದಿಲ್ಲಿ ಬಳಿಕ ಕೇರಳದಲ್ಲಿ 7,007 ಪ್ರಕರಣಗಳು ಮತ್ತು ಮಹಾರಾಷ್ಟ್ರದಲ್ಲಿ 4,907 ಪ್ರಕರಣಗಳು ದಾಖಲಾಗಿವೆ.
550 ಸಾವು ಕಳೆದ 24 ಗಂಟೆಗಳ ಅವಯಲ್ಲಿ ವರದಿಯಾಗಿದೆ. ಮರಣ ದರ ಪ್ರಮಾಣ ಶೇ.1.48ರಲ್ಲಿ ಇದೆ. ಈ ಹೊಸ ಸಾವುಗಳ ಪೈಕಿ ಶೇ.80ರಷ್ಟು ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿದೆ. ಮಹಾರಾಷ್ಟ್ರದಲ್ಲಿ 125 ಸಾವು ಸಂಭವಿಸಿದ್ದು, ಶೇ.22.7ರಷ್ಟಾಗಿದ್ದರೆ, ದಿಲ್ಲಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಅನುಕ್ರಮವಾಗಿ 85 ಮತ್ತು 49 ಸಾವಿನ ವರದಿಯಾಗಿದೆ.