ಬೆಂಗಳೂರು; ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ಮುಸುಕಿನ ಗುದ್ದಾಟ ಬಟಾಬಯಲಾಗಿದೆ. ಪಕ್ಷದ ಮೇಲಿನ ಯಡಿಯೂರಪ್ಪ ಅವರ ಹಿಡಿತವನ್ನು ತಪ್ಪಿಸಲು ನಳಿನ್ ಸದ್ದಿಲ್ಲದೆ ಕಸರತ್ತು ಮಾಡುತ್ತಿದ್ದಾರೆಯೇ? ಎಂಬ ಅನುಮಾನ ಸಹ ಇದೀಗ ಮೂಡಿದೆ.
ರಾಜ್ಯದಲ್ಲಿ ಪಕ್ಷದ ಮೇಲಿನ ಬಿ.ಎಸ್. ಯಡಿಯೂರಪ್ಪ ಅವರ ಹಿಡಿತವನ್ನು ತಪ್ಪಿಸುವ ಏಕೈಕ ಕಾರಣಕ್ಕಾಗಿಯೇ ಬಿಜೆಪಿ ಹೈಕಮಾಂಡ್ ಕರಾವಳಿ ಭಾಗದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ, ಇದೀಗ ಈ ಅನುಮಾನಗಳಿಗೆ ಪುಷ್ಠಿ ನೀಡುವಂತೆ ನಳಿನ್ ಕುಮಾರ್ ಕಟೀಲ್ ಪಕ್ಷದ ಆಯಾ ಕಟ್ಟಿನ ಹುದ್ದೆಗಳಿಗೆ ಬಿಎಸ್ವೈ ವಿರೋಧಿ ಬಣದ ನಾಯಕರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯ ಶಿವಮೊಗ್ಗ ಮೂಲದ ಭಾನುಪ್ರಕಾಶ್ ಹಾಗೂ ನಿರ್ಮಲ್ ಕುಮಾರ್ ಸುರಾನ ಬಿಎಸ್ವೈ ಕಡು ವಿರೋಧಿಗಳು. ಈ ಹಿಂದೆ ಬಿಎಸ್ವೈ ಬಿಜೆಪಿ ಪಕ್ಷವನ್ನು ತ್ಯಜಿಸಿ ಕೆಜೆಪಿ ಕಟ್ಟಿದಾಗ ಈ ಇಬ್ಬರೂ ನಾಯಕರು ಬಿಎಸ್ವೈ ಅವರನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದರು. ಪರಿಣಾಮ ಬಿಎಸ್ವೈ ಮತ್ತೆ ಮಾತೃ ಪಕ್ಷಕ್ಕೆ ಹಿಂದಿರುಗಿ ಪಕ್ಷದ ಅಧ್ಯಕ್ಷ ಗಾದಿಗೆ ಏರಿದ ನಂತರ ಈ ಇಬ್ಬರೂ ನಾಯಕರನ್ನು ಮೂಲೆ ಗುಂಪು ಮಾಡಲಾಗಿತ್ತು.
ಆದರೆ, ಇದೀಗ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಇಬ್ಬರೂ ನಾಯಕರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನೂತನ ಆದೇಶ ಹೊರಡಿಸಿದ್ದಾರೆ. ಈ ನಡುವೆ ಬಿಎಸ್ವೈ ಅವರನ್ನು ಕೆರಳಿಸುವ ಸಲುವಾಗಿಯೇ ಈ ಆದೇಶ ಹೊರಡಿಸಲಾಗಿದೆ ಎಂದು ಕೆಲವು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಇಷ್ಟು ದಿನ ತೆರೆ ಮರೆಯಲ್ಲಿದ್ದ ಬಿಎಸ್ವೈ ಮತ್ತು ನಳಿನ್ ಕುಮಾರ್ ನಡುವಿನ ಮುಸುಕಿನ ಗುದ್ದಾಟ, ಇದೀಗ ಈ ಆದೇಶದ ಮೂಲಕ ಬಟಾಬಯಲಾದಂತಿದೆ.