ಡಿಕೆಶಿ ಜಾಮೀನು ಅರ್ಜಿ; ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್​

ನವದೆಹಲಿ: ಕಾಂಗ್ರೆಸ್ ಪ್ರಭಾವಿ ನಾಯಕ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿರುವ ದೆಹಲಿ ಹೈಕೋರ್ಟ್ಬೆಳಗ್ಗೆಯಿಂದ ಪ್ರಕರಣದ ವಾದ ಪ್ರತಿವಾದ ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಹೀಗಾಗಿ ಇಂದಾದರೂ ಡಿಕೆಶಿ ಗೆ ಜಾಮೀನು ಲಭ್ಯವಾಗುತ್ತಾ ಎಂಬ ಕಾತರ ರಾಜ್ಯ ಕಾಂಗ್ರೆಸ್ವಠಾರದಲ್ಲಿ ಮನೆಮಾಡಿದೆ.

ಜಾರಿ ನಿರ್ದೇಶನಾಲಯದಿಂದ (ಇಡಿ) ಕಳೆದ ಮೂರು ವಾರಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಇಡಿ ಅಧಿಕಾರಿಗಳ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ್ದ ನ್ಯಾಯಮೂರ್ತಿ ಅಜಯ್​ ಕುಮಾರ್ ಕುಮಾರ್​ ಜಾಮೀನು ಅರ್ಜಿಯನ್ನು ವಜಾ ಮಾಡಿ ನ್ಯಾಯಾಂಗ ಬಂಧನವನ್ನು ಮುಂದುವರೆಸಿದ್ದರು.

ಈ ಹಿನ್ನೆಲೆಯಲ್ಲಿ ಡಿಕೆಶಿ ಪರ ವಕೀಲರು ನಿನ್ನೆ ಸಂಜೆಯೇ ಈ ಕುರಿತು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್​ನಲ್ಲಿ ವಾದ ಮಂಡಿಸಿರುವ ಡಿಕೆಶಿ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹಟಗಿ ಮತ್ತು ದಯಾನ್ ಕೃಷ್ಣನ್, ಇಡಿ ಅಧಿಕಾರಿಗಳು ತನಿಖೆ ವೇಳೆ ಡಿಕೆಶಿ ಅವರಿಂದ 50ಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ವಿಚಾರಣೆ ವೇಳೆ ದಾಖಲಿಸಿಕೊಂಡಿರುವ ಮಹತ್ವದ ದಾಖಲಾತಿಗಳನ್ನು ಮತ್ತೆ ಡಿಕೆಶಿ ಅವರಿಗೆ ಕೊಡಿಸುವಂತೆ ನ್ಯಾಯಾಲಯದ ಎದುರು ಮನವಿ ಮಾಡಿಕೊಂಡಿದ್ದರು. ಮುಂದಿನ ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಈ ದಾಖಲೆ ತಮಗೆ ಎಷ್ಟರ ಮಟ್ಟಿಗೆ ಅವಶ್ಯಕತೆ ಇದೆ ಎಂದು ಡಿಕೆಶಿ ಪರ ವಕೀಲರು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಟ್ಟಿದ್ದರು.

ಆದರೆ, ಇಡಿ ಪರ ವಕೀಲರು ಡಿಕೆಶಿ ಗೆ ಜಾಮೀನು ನೀಡುವುದನ್ನು ಇಂದು ಸಹ ಕಟುವಾಗಿ ವಿರೋಧಿಸಿದ್ದಾರೆ. ಕೊನೆಗೂ ಇಬ್ಬರ ಪರ ವಾದ ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್​ ತೀರ್ಪನ್ನು ಕಾಯ್ದಿರಿಸಿದ್ದು, ಸಂಜೆ ವೇಳೆಗೆ ಡಿಕೆಶಿ ಜಾಮೀನು ಅರ್ಜಿಗೆ ತಾರ್ಕಿಕ ಅಂತ್ಯ ಪ್ರಾಪ್ತವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ