ಬೆಂಗಳೂರು: ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಚಾಟಿ ಬೀಸಿದ್ದಾರೆ.
ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆ.
ಸರ್ಕಾರ ಪತನದ ಮುನ್ಸೂಚನೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಮತ್ತು ಅಧಿಕಾರಿಗಳಿಗೆ ಭಡ್ತಿ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಈ ಆದೇಶವನ್ನು ಹೊರಡಿಸಿದ್ದಾರೆ.
ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ ಸೋಮವಾರ ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದರು.
ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.
ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.
ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
ಎಇ ಹುದ್ದೆಯಿಂದ ಎಇಇ ಹುದ್ದೆ-100
ಜೆಇ ಹುದ್ದೆಯಿಂದ ಎಇಇ(2)-200
ಎಇಇ ಹುದ್ದೆಯಿಂದ ಇಇ – 400
ಇಇ ಹುದ್ದೆಯಿಂದ ಎಸ್ಇ-126