ಬೆಂಗಳೂರು,ಜು.2-ರಾಜೀನಾಮೆ ಕೊಡುವ ಶಾಸಕರ ಬ್ಲಾಕ್ಮೇಲ್ ತಂತ್ರಕ್ಕೆ ನಾಯಕರು ಮಣಿಯದೆ ಸರ್ಕಾರದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕೆಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ದಿಟ್ಟ ತೀರ್ಮಾನವನ್ನು ಕೈಗೊಂಡು ಯಾವ ಶಾಸಕರನ್ನು ಓಲೈಸುವ, ಮನವೊಲಿಸುವ, ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಬಾರದು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದರು.
ಜನರ ಕೆಲಸ ಹಾಗೂ ಒಳ್ಳೆಯ ಕೆಲಸವನ್ನು ಸರ್ಕಾರ ಮುಂದುವರೆಸಬೇಕು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸುವ ವಿಚಾರವನ್ನು ಶಾಸಕರ ಆತ್ಮಸಾಕ್ಷಿಗೆ ಬಿಡುವುದು ಸೂಕ್ತ. ಇಲ್ಲದಿದ್ದರೆ ಅಸಮಾಧಾನಗೊಂಡ ಶಾಸಕರ ಮನವೊಲಿಕೆ ಪ್ರಯತ್ನ ಹರಿದ ಕಂಬಳಿಗೆ ತೇಪೆ ಹಾಕಿದಂತಾಗುತ್ತದೆ. ಕಾಂಗ್ರೆಸ್-ಜೆಡಿಎಸ್ನಲ್ಲೂ ಪಕ್ಷ ಬಿಡುವವರು ಇಲ್ಲ. ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ವಿಧಾನಸಭೆಗೆ ಮಧ್ಯಂತರ ಚುನಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ಆರು ತಿಂಗಳೊಳಗೆ ಜಿಪಂ, ತಾಪಂ, ಪುರಸಭೆ, ಪಪಂ , ನಗರಸಭೆಗಳಿಗೆ ಚುನಾವಣೆ ಎದುರಾಗಲಿದ್ದು, ಅದಕ್ಕೆ ಸಿದ್ದರಾಗುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಇದನ್ನು ಬೇರೆ ರೀತಿ ವ್ಯಾಖ್ಯಾನಿಸುವುದು ಸೂಕ್ತವಲ್ಲ ಎಂದರು.
ಕಾಂಗ್ರೆಸ್ನ ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತ್ರಕ್ಕೆ ಇದು ರಾಜೀನಾಮೆ ಪರ್ವವಲ್ಲ. 10-15 ಮಂದಿ ರಾಜೀನಾಮೆ ನೀಡಿದ್ದರೆ ಹಾಗೆ ಭಾವಿಸಬಹುದಿತ್ತು. ಸದ್ಯಕ್ಕೆ ಅಂತಹ ರಾಜೀನಾಮೆ ಇಲ್ಲ. ಸರ್ಕಾರ ಮತ್ತು ಮೈತ್ರಿ ಪಕ್ಷಗಳ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಶಾಸಕ ಆನಂದ್ಸಿಂಗ್ ಅವರು, ಜಿಂದಾಲ್ಗೆ ಭೂಮಿ ನೀಡಿದ ವಿಚಾರಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಜಿಂದಾಲ್ಗೆ ಜಮೀನು ನೀಡುವುದು ತಮ್ಮ ಅಭಿಪ್ರಾಯ ಕೂಡ. ಈ ವಿಚಾರದಲ್ಲಿ ಸರ್ಕಾರ ಸಂಪುಟ ಉಪಸಮಿತಿ ರಚಿಸಿದೆ. ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಸಂಪುಟ ಉಪಸಮಿತಿಯ ಗಮನಕ್ಕೆ ತರಬಹುದು, ದಾಖಲೆಗಳನ್ನು ನೀಡಬಹುದು. ಅಲ್ಲಿ ಖನಿಜ ಸಂಪತ್ತಿದೆ ಇಲ್ಲವೇ ಎಂಬ ಬಗ್ಗೆ ಸಮಿತಿ ಗಮನಕ್ಕೆ ತರಲು ಅವಕಾಶವಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.