ಎಸ್ಐಟಿಯಿಂದ ಐಎಂಎ ಒಡೆತನದ ಫಾರ್ಮಾ ಮಳಿಗೆಗಳ ಮೇಲೆ ದಾಳಿ

ಬೆಂಗಳೂರು, ಜು.2- ಐಎಂಎ ಒಡೆತನದ ಫ್ರಂಟ್ ಲೈನ್ ಫಾರ್ಮಾ ಮಳಿಗೆಗಳ ಮೇಲೆ ಇಂದೂ ಸಹ ಎಸ್‍ಐಟಿ ದಾಳಿ ಮುಂದುವರೆಸಿದೆ.

ಇದುವರೆಗೂ ನಡೆಸಿದ ಮಳಿಗೆಗಳ ಮೇಲಿನ ದಾಳಿಯಿಂದ 70 ಲಕ್ಷ ರೂ. ಬೆಲೆಯ ಫಾರ್ಮಸಿ ಮತ್ತು ವಿದ್ಯುನ್ಮಾನ ವಸ್ತುಗಳ ಹಾಗೂ 4.40ಲಕ್ಷ ರೂ. ನಗದನ್ನು ಎಸ್‍ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿರುವ 22 ಫಾರ್ಮಾ ಮಳಿಗೆಗಳ ಪೈಕಿ ಇಂದೂ ಸಹ ಕೆಲವು ಮಳಿಗೆಗಳ ಮೇಲೆ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ಮುಂದುವರೆದಿದೆ.

ಬಿಡಿಎ ಎಕ್ಸಿಕ್ಯೂಟಿವ್ ಇಂಜಿನಿಯರ್ ಕುಮಾರ್ ಅವರ ಮನೆಯಲ್ಲಿ ಆಸ್ತಿಗೆ ಸಂಬಂಧಿಸಿದಂತಹ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್‍ಖಾನ್ ಮೊದಲ ಆಡಿಯೋದಲ್ಲಿ ತಿಳಿಸಿರುವಂತೆ ಜಯನಗರದ ಐದನೇ ಬ್ಲಾಕ್‍ನಲ್ಲಿರುವ ಕುಮಾರ್ ಮನೆ ಮೇಲೆ ನಿನ್ನೆ ಎಸ್‍ಐಟಿ ದಾಳಿ ಮಾಡಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಮನ್ಸೂರ್‍ಖಾನ್‍ನಿಂದ ಕುಮಾರ್ 4 ಕೋಟಿ ಹಣ ಪಡೆದಿರುವ ಬಗ್ಗೆ ಮಾಹಿತಿ ಇದ್ದು, ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರೆದಿದೆ ಎಂದು ಗಿರೀಶ್ ತಿಳಿಸಿದ್ದಾರೆ.

ಬಹುಕೋಟಿ ಹಗರಣದ ಪ್ರಕಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ವಸಂತನಗರದಲ್ಲಿರುವ ಫಾರ್ಮಾ ಮಳಿಗೆಯಿಂದ 33 ಲಕ್ಷ ಬೆಲೆಯ ಮೆಡಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡರೆ ಉಳಿದಂತೆ ಸೆಪಿಂಗ್ ರಸ್ತೆಯ ಮಳಿಗೆಯಿಂದ ಫಾರ್ಮಸಿ ಸೇರಿದಂತೆ 27 ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ