ಜೂನ್ 25ರ ನಂತ್ರ ಸಚಿವ ಡಿಕೆ ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕನಸಿನ ಹುದ್ದೆ ಏರಲೇಬೇಕು ಎಂದುಕೊಂಡಿರುವ ಸಚಿವ ಡಿಕೆ ಶಿವಕುಮಾರ್ ಭವಿಷ್ಯ ಜೂನ್ 25ಕ್ಕೆ ನಿರ್ಧಾರ ಆಗಲಿದೆ.

ಜೂನ್ 25ರ ಸತ್ವ ಪರೀಕ್ಷೆಯಲ್ಲಿ ಪಾಸಾದರೆ, ರಾಜ್ಯ ಕಾಂಗ್ರೆಸ್‍ಗೆ ಡಿಕೆಶಿಯೇ ಅಧಿಪತಿ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಜೂನ್ 25ರಂದು ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರ ಐಟಿ ಕೇಸ್‍ಗೆ ಸಂಬಂಧಿಸಿದ ದೂರೊಂದರ ತೀರ್ಪು ಪ್ರಕಟವಾಗಲಿದೆ. ತೀರ್ಪು ಡಿ.ಕೆ ಶಿವಕುಮಾರ್ ಪರವಾಗಿ ಬಂದರೆ ಅವರಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ. ಒಂದು ಸಾರಿ ಡಿಕೆಶಿಗೆ ಕೋರ್ಟ್ ಕೇಸಿನ ಜಂಜಾಟದಿಂದ ರಿಲೀಫ್ ಸಿಕ್ಕರೆ ಡಿಕೆಶಿ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊರಲು ಜೈ ಎನ್ನುವ ಸಾಧ್ಯತೆ ಇದೆ.

ಈಗ ಹೇಗಿದ್ದರೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬದಲಾವಣೆಯ ಮಾತು ಕೇಳಿ ಬರುತ್ತಿದ್ದು, ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರೋದು ಗ್ಯಾರಂಟಿ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದು ರಾಜ್ಯದ ಸಿಎಂ ಆಗಬೇಕು ಎಂಬುದು ಡಿಕೆಶಿ ಕನಸು. ಡಿಕೆಶಿ ಸಂಕಷ್ಟದ ಪರಿಸ್ಥಿತಿಯಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಟ್ರಬಲ್ ಶೂಟರ್ ಎನಿಸಿಕೊಂಡಿದ್ದಾರೆ.

ತಮ್ಮ ಬಹು ದಿನಗಳ ಬಯಕೆಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಅದರ ಮೂಲಕ ಸಿಎಂ ಖುರ್ಚಿ ಕನಸು ನನಸು ಮಾಡಿಕೊಳ್ಳಲು ಡಿಕೆಶಿ ಮೆಗಾ ಪ್ಲಾನ್ ಮಾಡಿದ್ದಾರೆ. ಯಾವುದಕ್ಕೂ ಜೂನ್ 25 ರವರೆಗೆ ನಾನು ಮಾತನಾಡಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಆದರೆ 25ರ ನಂತರ ಅಸಲಿ ಆಟ ಶುರು ಮಾಡುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ