ನಮಗೂ ಆಡಳಿತದಲ್ಲಿ ಅವಕಾಶ ಕೊಡಿ-ಕೆಳಹಂತದ ಕಾರ್ಯಕರ್ತರ ಒತ್ತಾಯ

ಬೆಂಗಳೂರು,ಜೂ.17-ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವುದು, ಶಾಸಕರಿಗೆ ಸಚಿವ ಸ್ಥಾನ ಕೊಡುವುದರಲ್ಲಿ ಸಮಯ ಕಳೆಯುತ್ತಿರುವ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಕೆಳಹಂತದ ಕಾರ್ಯಕರ್ತರು ನಮಗೂ ಆಡಳಿತದಲ್ಲಿ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ರಚನೆಯಾಗಿ ಒಂದು ವರ್ಷ ಒಂದು ತಿಂಗಳು ಕಳೆದಿದೆ. ಆದರೆ ಈವರೆಗೂ ನಿಗಮಮಂಡಳಿಗಳಿಗೆ ನಿರ್ದೇಶಕರನ್ನು ನೇಮಿಸಿಲ್ಲ. ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರನ್ನು ನೆನಪಿಸಿಕೊಳ್ಳಲಾಗುತ್ತದೆ. ಉಳಿದಂತೆ ಅಧಿಕಾರ ಹಂಚಿಕೆ ಮಾಡುವಾಗ ಶಾಸಕರುಗಳಷ್ಟೇ ಪ್ರಮುಖರಾಗುತ್ತಿದ್ದಾರೆ. ಯಾವ ಚುನಾವಣೆಗಳನ್ನೂ ಕೇವಲ ಶಾಸಕರಿಂದಲೇ ಗೆಲ್ಲಲು ಸಾಧ್ಯವಿಲ್ಲ, ಕಾರ್ಯಕರ್ತರು ಅಗತ್ಯವಾಗಿ ಬೇಕೇಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಅದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತ್ತಷ್ಟು ಅಧಃಪತನ ಕಾಣಲಿದೆ ಎಂಬ ಎಚ್ಚರಿಕೆಯನ್ನು ಕಾರ್ಯಕರ್ತರು ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಾಸಕರು, ಸಚಿವರು ಹಾಗೂ ಹಿರಿಯ ನಾಯಕರನ್ನು ಭೇಟಿ ಮಾಡುವ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ತಮ್ಮನ್ನು ನಿಗಮ ಮಂಡಳಿಗೆ ನೇಮಕಾತಿ ಮಾಡುವಂತೆ ಬೇಡಿಕೆ ಮುಂದಿಡುತ್ತಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಕಾರ್ಯಕರ್ತರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಲು ವರ್ಷಗಟ್ಟಲೆ ವಿಳಂಬ ಮಾಡಲಾಗಿತ್ತು. ಈಗ ಸಮ್ಮಿಶ್ರ ಸರ್ಕಾರದಲ್ಲೂ ಅದೇ ಧೋರಣೆ ಅನುಸರಿಸಲಾಗುತ್ತಿದೆ. ಸರ್ಕಾರಕ್ಕೆ ಅಪಾಯತಂದೊಡ್ಡುತ್ತಾರೆ ಎಂಬ ಕಾರಣಕ್ಕಾಗಿ ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದೆ. ಆದರೆ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ.

ಕೂಡಲೇ ಕೆಳಹಂತದ ಕಾರ್ಯಕರ್ತರನ್ನು ನಿಗಮಮಂಡಳಿಗಳು, ಪ್ರಾಧಿಕಾರಿಗಳು, ಆಯೋಗಗಳಿಗೆ ನೇಮಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಡಗಳು ಹೆಚ್ಚಾಗುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ