ಇಂದು ಮಧ್ಯಾಹ್ನ ಡಿಕೆಶಿ ಜಾಮೀನು ಅರ್ಜಿ ತೀರ್ಪು; ಇಂದಾದರೂ ಟ್ರಬಲ್ ಶೂಟರ್ ಗೆ ಜೈಲಿನಿಂದ ಮುಕ್ತಿ ಸಿಗುತ್ತಾ?

ನವದೆಹಲಿ: ದೆಹಲಿ ನಿವಾಸದಲ್ಲಿ ಪತ್ತೆಯಾದ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಇಡಿ ಮತ್ತು ಡಿಕೆಶಿ ವಾದ ಪ್ರತಿವಾದಗಳು ಮುಕ್ತಾಯಗೊಂಡಿವೆ. ನ್ಯಾ. ಅಜಯ್ ಕುಮಾರ್ ಕುಹರ್ ಅವರು ಸೆ.21ರಂದು ತೀರ್ಪನ್ನು ಸೆ. 25ಕ್ಕೆ ಕಾಯ್ದಿರಿಸಿದ್ದರು. ಅದರಂತೆ ಇಂದು ಮಧ್ಯಾಹ್ನ 3:30ಕ್ಕೆ ತೀರ್ಪು ಪ್ರಕಟವಾಗಲಿದೆ.

ಒಂದು ವೇಳೆ ಇಂದು ಕೂಡ ಡಿಕೆಶಿಗೆ ಜಾಮೀನು ಸಿಗದಿದ್ದರೆ ಮುಂದೆ ದೆಹಲಿ ಹೈಕೋರ್ಟಿಗೆ ಹೋಗಿ ಜಾಮೀನು ಪಡೆಯಬೇಕು. ಅಥವಾ ಅ. 1ರಂದು ಜೆಸಿ ಅವಧಿ ಮುಗಿದ ಬಳಿಕ ಮತ್ತೆ ಇಡಿ ಕೋರ್ಟಿಗೆ ಬರಬೇಕು.

ಸೆ. 4ರಿಂದಲೂ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ವಿಶೇಷ ನ್ಯಾಯಾಲಯವು ಅ. 1ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಳಪಡಿಸಿತ್ತು. ಈ ವೇಳೆ, ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈಗ ಜಾಮೀನು ಅರ್ಜಿ ತೀರ್ಪು ಬರುವವರೆಗೂ ಡಿಕೆಶಿ ಅವರು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದಾರೆ.

ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯಲ್ಲಿ ಜಾರಿ ನಿರ್ದೇಶನಾಲಯದ ಪರವಾಗಿ ಕೆ.ಎಂ. ನಟರಾಜ್ ಅವರು ವಾದ ಮಂಡನೆ ಮಂಡಿಸಿದ್ದಾರೆ. ಡಿಕೆ ಶಿವಕುಮಾರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹಟಗಿ ಮತ್ತು ದಯನ್ ಕೃಷ್ಣನ್ ಅವರು ಪ್ರತಿವಾದ ಮಂಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ