ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಮತ್ತೆ ಅಧಿಕಾರದ ಗದ್ದುಗೆಗೇರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಇಂದು ಪಕ್ಷದ ಹಿರಿಯ ನಾಯಕರಾದ ಎಲ್ ಕೆ ಆಡ್ವಾನಿ ಮತ್ತು ಮುರಳಿ ಮನೋಹರ ಜೋಶಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಗೌರವಾನ್ವಿತ ಆಡ್ವಾಣಿ ಜಿ ಅವರಂತ ಮಹಾನ್ ವ್ಯಕ್ತಿಗಳು ಪಕ್ಷವನ್ನು ಕಟ್ಟಲು ದಶಕಗಳ ಕಾಲ ಶ್ರಮಿಸಿದ ಮತ್ತು ಜನರಿಗೆ ಹೊಸ ಸೈದ್ಧಾಂತಿಕ ನಿರೂಪಣೆಯನ್ನು ಒದಗಿಸಿದ್ದಕ್ಕಾಗಿಯೇ ಇಂದು ಬಿಜೆಪಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಡಾ.ಮುರಳಿ ಮನೋಹರ ಜೋಷಿಯವರು ವಿದ್ವಾಂಸರು ಮತ್ತು ಬೌದ್ಧಿಕ ಪರಿಣಿತರು. ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಸದಾ ಬಿಜೆಪಿಯನ್ನು ಬಲಗೊಳಿಸಲು ಕೆಲಸ ಮಾಡಿದರು ಮತ್ತು ನನ್ನನ್ನು ಒಳಗೊಂಡತೆ ಹಲವಾರು ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದಂತವರು. ಇಂದು ಮುಂಜಾನೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದ್ದಾರೆ.
543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಆಡ್ವಾಣಿ ಮತ್ತು ಜೋಷಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ಅಭಿನಂದಿಸಿದರು.
pm modi,l k advani,murali manohara joshi,meet