ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೇ ಕ್ಷಣದಲ್ಲಿ ತೇಜಸ್ವಿನಿ ಅನಂತ್‌ಕುಮಾರ್ ಅವರ ಕೈ ತಪ್ಪಿ, ಶಾಸಕ ರವಿಸುಬ್ರಹ್ಮಣ್ಯ ಅಣ್ಣನ ಮಗ ತೇಜಸ್ವಿ ಸೂರ್ಯನಿಗೆ ನೀಡಲಾಗಿದೆ. ಹೀಗಾಗಿ ಅಸಮಾಧಾನಗೊಂಡ ತೇಜಸ್ವಿನಿ ಅವರ ಬೆಂಬಲಿಗರು ಪಕ್ಷದ ತೀರ್ಮಾನದ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಬೆಳಗ್ಗೆ ತೇಜಸ್ವಿನಿ ಅನಂತ್‌ಕುಮಾರ್ ಅವರ ಮನೆಗೆ ಬಂದ ತೇಜಸ್ವಿ ಸೂರ್ಯನನ್ನು ಮನೆ ಮುಂದೆ ಅಡ್ಡಗಟ್ಟಿದ ನೂರಾರು ಕಾರ್ಯಕರ್ತರು, “ಸೂರ್ಯ, ನೀವು ಸರಿಯಾದ ಕ್ಯಾಂಡಿಡೇಟ್ ಅಲ್ಲ. ನಿಮ್ಮ ಡಿಬೇಟ್ಗಳನ್ನ ನಾವು ನೋಡ್ತಾ ಇದ್ದೀವಿ. ನಿಮಗೆ ನಿಭಾಯಿಸುವ ಶಕ್ತಿ ಇಲ್ಲ,” ಎಂದು ಮುಖಕ್ಕೆ ಹೊಡೆದ ಹಾಗೆ ನೇರವಾಗಿ ಹೇಳಿದರು. ನಂತರ ಬೇಕೇ ಬೇಕು ನ್ಯಾಯ ಬೇಕು. ಅಮರ್ ರಹೇ ಅಮರ್ ರಹೇ ಅನಂತ್‌ಕುಮಾರ್ ಅಮರ್ ರಹೇ ಎಂದು ಘೋಷಣೆ ಕೂಗಿದರು.
ಅಲ್ಲದೇ, “ಯಾರೀತ ತೇಜಸ್ವಿ? ಈತ ಯಾರು ಅಂತಲೇ ನಮಗೆ ಗೊತ್ತಿಲ್ಲ. ತೇಜಸ್ವಿನಿ ನನ್ನ ತಾಯಿ ಸಮಾನ ಎಂದು ಹೇಳುತ್ತಾರೆ ಅವರು. ಆದರೆ, ತಾಯಿಗೇ ದ್ರೋಹ ಮಾಡ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.
ತೇಜಸ್ವಿನಿ ಅನಂತಕುಮಾರ್ ಅವರನ್ನು ತೇಜಸ್ವಿ ಸೂರ್ಯ ಭೇಟಿ ವೇಳೆ ತಮ್ಮ ಅಸಮಾಧಾನವನ್ನು ತೇಜಸ್ವಿನಿ ಸ್ಪಷ್ಟವಾಗಿ ಪ್ರಕಟಿಸಿದ್ದಾರೆ. ಕಾರ್ಯಕರ್ತರ ಆಕ್ರೋಶ ಸಹಜವಾದದ್ದು. 25 ವರ್ಷಗಳಿಂದ ಅನಂತಕುಮಾರ್ ಜೊತೆ, ಪಕ್ಷದ ಜೊತೆ ಕೆಲಸ ಮಾಡಿರುವವರು. ಧಿಡೀರ್ ಬೆಳವಣಿಗೆ ಅವರಲ್ಲಿ ಆಕ್ರೋಶ ಉಂಟುಮಾಡಿದೆ ಎಂದರು. ಈ ವೇಳೆ ಸ್ಪಷ್ಟನೆ ನೀಡಲು ಬಂದ ತೇಜಸ್ವಿ ಸೂರ್ಯನ ಮಾತನ್ನು ತಡೆದ ತೇಜಸ್ವಿನಿ, ಇದು ವಾದ ಮಾಡುವ ಸ್ಥಳವಲ್ಲ! ಎಂದು ಖಡಕ್ ಆಗಿ ಹೇಳಿದರು. ಹೀಗಾಗಿ ಬೆಂಬಲ ಪಡೆಯಲು ಬಂದ ತೇಜಸ್ವಿ ಸೂರ್ಯ ಬೆಂಬಲಿಗರ ವಿರೋಧದಲ್ಲೇ ವಾಪಸ್ಸಾದರು.