ಸಿದ್ದರಾಮಯ್ಯ ಆಶೀರ್ವಾದ ಪಡೆದ ಪ್ರಜ್ವಲ್​ ರೇವಣ್ಣ; ಮಾಜಿ ಸಿಎಂ ಹೇಳಿದ ಪಾಠವೇನು?

ಮೈಸೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಪ್ರಜ್ವಲ್​ ರೇವಣ್ಣ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಎ. ಮಂಜು ವಿರುದ್ಧ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಸಾಕಷ್ಟು ಹಿರಿಯ ನಾಯಕರ ಸಲಹೆ ಪಡೆಯುತ್ತಿರುವ ಪ್ರಜ್ವಲ್​, ಇಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪ್ರಜ್ವಲ್​ ರೇವಣ್ಣ​, ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.

ಭೇಟಿ ನಂತರ ಮಾತನಾಡಿದ ಪ್ರಜ್ವಲ್​, “ನಾನು ಚಿಕ್ಕವನಿದ್ದಾಗಿನಿಂದಲೂ ಸಿದ್ದರಾಮಯ್ಯ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಹಾಗಾಗಿ ಅವರ ಆಶೀರ್ವಾದ ಪಡೆದುಕೊಳ್ಳಲು ಬಂದಿದ್ದೆ.  ಚುನಾವಣೆ ಕುರಿತು ಸಾಕಷ್ಟು ಸಲಹೆ ನೀಡಿದ್ದಾರೆ. ಎಲ್ಲೆಲ್ಲಿ ಪ್ರಚಾರಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ. ನಮ್ಮ ಕುಟುಂಬದ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ,” ಎಂದು ಭೇಟಿ ಹಿಂದಿನ ಉದ್ದೇಶ ಬಿಚ್ಚಿಟ್ಟರು.

ಚುನಾವಣೆ ಸಮಯದಲ್ಲಿ ಪ್ರತಿಸ್ಪರ್ಧಿ ಬಗ್ಗೆ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ. ಆದರೆ, ಪ್ರಜ್ವಲ್​ ಎಂದಿಗೂ ವೈಯಕ್ತಿಕ ಟೀಕೆ ಮಾಡುವುದಿಲ್ಲವಂತೆ.

“ಪ್ರತಿಸ್ಪರ್ಧಿ ಎ. ಮಂಜು ಬಗ್ಗೆ ನನಗಂತೂ ಭಯವಿಲ್ಲ. ನಾನು ಯಾವತ್ತಾದರೂ ಎ.ಮಂಜು ವಿರುದ್ಧ ಮಾತನಾಡಿದ್ದು ಕೇಳಿದ್ದೀರಾ. ನಾನು ಟೀಕೆಯ ರಾಜಕಾರಣ ಮಾಡುವುದಿಲ್ಲ,” ಎಂದರು ಅವರು.

ಹಾಸನದಲ್ಲಿ ಎ.ಮಂಜು ನಾಮಿನೇಷನ್​ ವೇಳೆ ಸಾಕಷ್ಟು ಜನ ಸೇರಿದ್ದರು. ಈ ಬಗ್ಗೆ ಪ್ರಜ್ವಲ್​ ವ್ಯಂಗ್ಯವಾಡಿದ್ದಾರೆ. “400-500 ರೂಪಾಯಿ ಕೊಟ್ಟರೆ ಜನ ಸೇರಿಸೋದು ದೊಡ್ಡದಲ್ಲ. ಹಾಗೇನಾದರೂ ದುಡ್ಡು ಕೊಟ್ಟು ಜನರನ್ನು ಕರೆಸುವುದಾದರೆ ನಾವು ಹಾಸನ ಜಿಲ್ಲೆ ತುಂಬ ಜನ ಸೇರಿಸುತ್ತೇವೆ. ಜನ ಸೇರಿಸೋದು ದೊಡ್ಡ ವಿಷಯವೇ ಅಲ್ಲ. ಯಾರಿಗೆ ಮತ ನೀಡಬೇಕು ಎಂಬುದನ್ನು ಜನ ಈಗಾಗಲೇ ನಿರ್ಧಾರ ಮಾಡಿದ್ದಾರೆ,” ಎಂದರು ಪ್ರಜ್ವಲ್​.

ಕಡೂರು, ಅರಕಲಗೂಡು, ಅರಸಿಕೆರೆ ಹಾಸನಕ್ಕೆ ಸಿದ್ದರಾಮಯ್ಯ ಪ್ರಚಾರಕ್ಕೆ ಬರುತ್ತೇವೆ ಎನ್ನುವ ಭರವಸೆ ನೀಡಿದ್ದಾರಂತೆ. ಜೊತೆಗೆ ಬಹಿರಂಗ ಸಭೆಯಲ್ಲಿಯೂ ಅವರು ಭಾಗಿಯಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ