ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸುವವರಿಗೆ ತೇಜಸ್ವಿ ಸೂರ್ಯ ಬಹಿರಂಗ ಸವಾಲು!

ಬೆಂಗಳೂರು: ಚುನಾವಣೋತ್ತರ ಸಮೀಕ್ಷಾ ಫಲಿತಾಂಶದ ಕುರಿತು ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸುವ ಜನ ಪ್ರತಿನಿಧಿಗಳಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬಹಿರಂಗ ಸವಾಲೆಸೆದಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಜನಪ್ರತಿನಿಧಿಗಳು ಅದೇ ಇವಿಎಂಗಳ ಮೂಲಕವೇ ಗೆದ್ದು ಬಂದವರಿದ್ದಾರೆ. ಹೀಗಾಗಿ ಅವರು ಇವಿಎಂ ಸರಿಯಿಲ್ಲ ಎಂದು ಹೇಳಿ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ಚಾಲೆಂಜ್ ಮಾಡಿದ್ದಾರೆ.

ಸಿಎಂ ಹೇಳಿದ್ದೇನು?
ಎಕ್ಸಿಟ್ ಪೋಲ್ ದೇಶದಲ್ಲಿ ಮೋದಿ ಅಲೆ ಇದೆ ಎಂದು ತೋರಿಸಲು ಅಷ್ಟೆ. ತಾತ್ಕಾಲಿಕ, ಕಾಲ್ಪನಿಕ ಮೋದಿ ಅಲೆ ಹೆಚ್ಚು ದಿನ ಇರಲ್ಲ. ಬಹುಮತದ ಕೊರತೆಯಾದರೆ ಪ್ರಾದೇಶಿಕ ಪಕ್ಷ ಸೆಳೆಯಲು ಯತ್ನ ಮಾಡಲಾಗುತ್ತದೆ. ಎಕ್ಸಿಟ್ ಪೋಲ್ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ.

ಬಿಜೆಪಿ ಎಕ್ಸಿಟ್ ಪೋಲ್ ಮೂಲಕ ವೇದಿಕೆ ಸಿದ್ಧಪಡಿಸುತ್ತಿದೆ. ಇದು ಎಕ್ಸಿಟ್ ಪೋಲ್ ಅಷ್ಟೇ. ಎಕ್ಸಾಟ್ ಪೋಲ್ ಅಲ್ಲ ಎಂದು ಬರೆದು ಎಚ್.ಡಿ ದೇವೇಗೌಡ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ರಾಹುಲ್ ಗಾಂಧಿ, ಬಿಎಸ್‍ಪಿ ಹಾಗೂ ಎಕ್ಸಿಟ್ ಪೋಲ್ 2019 ಹ್ಯಾಷ್‍ಟ್ಯಾಗ್ ಹಾಕಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು.

ಪರಮೇಶ್ವರ್ ಹೇಳಿದ್ದೇನು?
ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗೆ ಇದೆ. ವಾಸ್ತವ ಸ್ಥಿತಿ ದೇಶದಲ್ಲಿ ಬೇರೆ ರೀತಿಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ 300 ಸ್ಥಾನಗಳು ಬರುತ್ತದೆ ಎಂದು ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಸ್ಪಷ್ಟವಾದ ಚಿತ್ರಣ ಗೊತ್ತಾಗುತ್ತದೆ. ಎಲ್ಲಾ ವಿರೋಧ ಪಕ್ಷಗಳು ಕೂಡ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿರೋಧ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳೇ ಬ್ಯಾಲೆಟ್ ಪೇಪರ್‍ಗಳನ್ನು ಆಯ್ಕೆ ಮಾಡುತ್ತಿದ್ದಾರೆ. 2019 ಎಕ್ಸಿಟ್ ಪೋಲ್ ಸಂಪೂರ್ಣವಾಗಿ ಆಡಳಿತ ಪಕ್ಷದ ಪರವಾಗಿ ಇದೆ. ಇವಿಎಂಗಳನ್ನು ಇಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಆರೋಪಿಸಿದ್ದರು.

ಮಮತಾ ಬ್ಯಾನರ್ಜಿ:
ಚುನಾವಣೋತ್ತರ ಸಮೀಕ್ಷೆ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲಾರೆ. ಸಾವಿರಾರು ಇವಿಎಂಗಳು ಬದಲಾವಣೆ ಮಾಡಿರುವ ಸಾಧ್ಯತೆಗಳಿವೆ. ಎಲ್ಲ ವಿರೋಧ ಪಕ್ಷಗಳು ಒಂದಾಗಿ ಈ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದರು.

ರಾಹುಲ್ ಗಾಂಧಿ:
ಚುನಾವಣೆ ಸಂದರ್ಭದಲ್ಲಿ ಎಲೆಕ್ಟೋಲ್ ಬಾಂಡ್ ಮತ್ತು ಇವಿಎಂಗಳನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಆಯೋಗ ನಮೋ ಟಿವಿ, ಮೋದಿ ಸೇನೆ ಮತ್ತು ಕೇದಾರನಾಥದಲ್ಲಿಯ ಡ್ರಾಮಾ, ಮೋದಿ ಹಾಗು ಗ್ಯಾಂಗ್ ಮುಂದೆ ಶರಣಾಗಿರೋದನ್ನು ಎಲ್ಲ ಭಾರತೀಯರು ನೋಡಿದ್ದಾರೆ. ಚುನಾವಣಾ ಆಯೋಗ ಮೋದಿ ಗ್ಯಾಂಗ್ ಮುಂದೆ ಗೌರವಾನ್ವಿತವಾಗಿ ಭಯಗೊಂಡಿದೆ ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದರು.

ಭಾನುವಾರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿತ್ತು. 10ರಲ್ಲಿ 9 ಸಮೀಕ್ಷೆಗಳು ಕೇಂದ್ರದಲ್ಲಿ ಮತ್ತೊಮ್ಮೆ ಎನ್‍ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದವು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ