ಕೇಂದ್ರದಲ್ಲಿ ದೇವೇಗೌಡರ ಮಾತಿಗೆ ಮನ್ನಣೆ ದೊರೆಯುವಂತಹ ಸರ್ಕಾರ-ಸಿ.ಎಂ.ಕುಮಾರಸ್ವಾಮಿ

ತೀರ್ಥಹಳ್ಳಿ,ಮಾ.3- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾತಿಗೆ ಬೆಲೆ ದೊರೆಯುವಂತಹ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಿದ್ದ ಒಕ್ಕಲಿಗರ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ಹಲವು ರೀತಿಯ ಚರ್ಚೆಗಳಾಗುತ್ತಿವೆ. ಈ ಬಾರಿಯ ರಾಜಕೀಯ ವಾತಾವರಣವನ್ನು ಗಮನಿಸಿದರೆ ಕೇಂದ್ರದಲ್ಲಿ ಗೌಡರ ಮಾತಿಗೆ ಮನ್ನಣೆ ದೊರೆಯುವಂತಹ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಅಂತಹ ಸರ್ಕಾರವೇ ಬರಲಿ ಎಂದು ಶಾರದಾಂಬೆಯಲ್ಲಿ ಪ್ರಾರ್ಥನೆ ಮಾಡುವುದಾಗಿ ಹೇಳಿದರು.

ಕಳೆದ 9 ತಿಂಗಳಿನಿಂದಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ಥಿರತೆಯ ಬಗ್ಗೆ ಪದೇ ಪದೇ ಪ್ರಸ್ತಾಪವಾಗಿದೆ. ಗಡುವಿನ ಮೇಲೆ ಗಡುವು ನೀಡುತ್ತಾ ಬಂದಿದ್ದರೂ ನಮ್ಮ ಸರ್ಕಾರ ಸುಭದ್ರವಾಗಿದೆ. ಮುಂದೆಯೂ ಕೂಡ ಮೈತ್ರಿ ಸರ್ಕಾರ ಮುಂದುವರೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಅರಣ್ಯದಲ್ಲಿ ಜನರು ವಾಸಿಸುತ್ತಿದ್ದಾರೆ. ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಅರಿವಿದ್ದು, ಒಂದೊಂದು ದಿನ ಪ್ರತಿ ಜಿಲ್ಲೆಯ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಅಪೇಕ್ಷೆ ಇದೆ. ಅದರಂತೆ ಅರಣ್ಯವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ ಎಂದರು.

ಹಾಲು ಉತ್ಪಾದಕರಿಗೆ 6 ರೂ. ಪ್ರೋತ್ಸಾಹ
ಏಪ್ರಿಲ್‍ನಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 6 ರೂ. ಪ್ರೋತ್ಸಾಹ ನೀಡಲಾಗುವುದು. ಕ್ಷೀರ ಭಾಗ್ಯ ಯೋಜನೆ ಹಾಗೂ ಈ  ರಾಜ್ಯ  ಸರ್ಕಾರ 2500 ಕೋಟಿ ರೂ. ಭರಿಸುತ್ತಿದೆ. ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್‍ನ ಹೊರೆ 11,500 ಕೋಟಿ ರೂ. ಆಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರೈತರ ಸಾಲಮನ್ನಾ ಬಗ್ಗೆ ಅನುಮಾನ ಪಡುವುದು ಬೇಡ. ಈಗಾಗಲೇ 10.40 ಲಕ್ಷ ಕುಟುಂಬಗಳ 4,130 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ.

ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ 46 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಕೃಷಿ ಪದ್ಧತಿಯಲ್ಲಿ ಬದಲಾವಣೆ ತಂದು ನಮ್ಮ ರೈತರನ್ನು ದೇಶಕ್ಕೆ ಮಾದರಿಯಾಗುವಂತೆ ಮಾಡುವ ಚಿಂತನೆ ಇದೆ ಎಂದು ಅವರು ಹೇಳಿದರು.

ರೈತರು ಸಾಲಗಾರರಾಗದಂತೆ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದ ಅವರು, ಬಯಲುಸೀಮೆ ಹಾಗೂ ಮಲೆನಾಡು ಭಾಗದ ಕ್ಷೇತ್ರಗಳಿಗೆ ತಲಾ ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ನೀಡಲಾಗಿದೆ ಎಂದು ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಒಕ್ಕಲಿಗರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಸಕ ಅರಗಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಂಜುನಾಥ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ