ಲೋಕಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ-ಮಾಜಿ ಪ್ರಧಾನಿ ದೇವೇಗೌಡರಿಂದ ಹಸಿರು ನಿಶಾನೆ

ಮಂಗಳೂರು,ಮಾ.3- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಲೋಕಸಭೆ ಚುನಾವಣೆಗೆ ಸ್ಫರ್ಧಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಸಿರುನಿಶಾನೆ ತೋರಿದ್ದಾರೆ.

ನಿಖಿಲ್ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಇನ್ನು ನಿರ್ಧಾರವಾಗಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂಬ ಒತ್ತಡ ಹೆಚ್ಚಾಗಿ ಕೇಳಿಬರುತ್ತಿದೆ. ಈ ನಡುವೆ ಮೈಸೂರು ಲೋಕಸಭಾ ಕ್ಷೇತ್ರದಲ್ಲೂ ಸ್ಪರ್ಧಿಸುವ ಪ್ರಸ್ತಾಪವಾಗುತ್ತಿದೆ. ದೇವೇಗೌಡರು ಸ್ಪರ್ಧೆಗೆ ಹಸಿರುನಿಶಾನೆ ತೋರಿದ್ದಾರೆ ಹೊರತು ಯಾವ ಕ್ಷೇತ್ರ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು, ನಿಖಿಲ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿದ್ದಾರೆ. ಆದರೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.

ಪಕ್ಷಕ್ಕೆ ನಿಷ್ಠವಾಗಿದ್ದು, ಮಂಡ್ಯ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೂ ಅವರ ಪರವಾಗಿ ಕೆಲಸ ಮಾಡುವುದಾಗಿಯೂ ಹೇಳಿದ್ದಾರೆ.

ಈ ನಡುವೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಾಮಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧೆ ಮಾಡುವಂತೆ ಜನರ ಒತ್ತಡವಿದ್ದರೆ ಸ್ಪರ್ಧಿ ಸುವಂತೆ ನಿಖಿಲ್‍ಗೆ ಸೂಚಿಸಿದ್ದೇನೆ. ಮಂಡ್ಯ ಜಿಲ್ಲೆಯ ಜನತೆ ನಿಖಿಲ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ಆಸೆಯೂ ಇಲ್ಲ. ಇನ್ನು ಎರಡು ವರ್ಷಗಳ ಕಾಲ ರಾಜಕೀಯಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ. ಆದರೆ ಜನರ ಒತ್ತಾಯ ಹೆಚ್ಚಾಗಿದೆ ಎಂದರು.

ಮಂಡ್ಯದಿಂದ ಯಾರು ಸ್ಪರ್ಧಿಸಬೇಕೆಂಬುದು ಇನ್ನು ತೀರ್ಮಾನವಾಗಿಲ್ಲ. ನಾನು ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯೋಚಿಸಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮಂಡ್ಯ-ಹಾಸನ ಮೊದಲಿನಿಂದಲೂ ಜೆಡಿಎಸ್‍ನ ಕ್ಷೇತ್ರಗಳಾಗಿವೆ. ಹೀಗಾಗಿ ಕಾಂಗ್ರೆಸ್ ಈ ವಿಚಾರದಲ್ಲಿ ಇನ್ನು ತೀರ್ಮಾನಕ್ಕೆ ಬಂದಿಲ್ಲ. ಮಾಜಿ ಸಚಿವ ಅಂಬರೀಶ್ ಅವರ ಪತ್ನಿ ಹಾಗೂ ನಟಿ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಲು ಅಪೇಕ್ಷೆ ಪಡುಯುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಕ್ಷೇತ್ರದ ಬಗ್ಗೆಯೂ ನಿರ್ಧಾರವಾಗಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತಂತೆ ಇನ್ನು ಯಾವುದೇ ತೀರ್ಮಾನವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಎಂಟೆಕ್ ಶಿಕ್ಷಣ ಪಡೆಯುವಂತೆ ಸಲಹೆ ಮಾಡಿದ್ದೇನೆ ಎಂದರು.

ಕಾಂಗ್ರೆಸ್‍ನ ಕೆಲವು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ಇಂಥ ಸನ್ನಿವೇಶವನ್ನು ಎದುರಿಸುವ ಉದ್ದೇಶದಿಂದಲೇ ಮುಖ್ಯಮಂತ್ರಿ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡದೆ ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ