ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಾದರೆ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ-ಮುಖ್ಯಮಂತ್ರಿ ಕುಮಾರಸ್ವಾಮಿ

ಶಿವಮೊಗ್ಗ,ಮಾ.3-ತಮ್ಮ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸುವುದಾದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಲಾಯನ ಮಾಡುವುದಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ಕ್ಷೇತ್ರದಿಂದ ಯಾರು ಅಭ್ಯರ್ಥಿಯಾಗಬೇಕೆಂಬುದನ್ನು ಅಂತಿಮವಾಗಿ ತೀರ್ಮಾನ ಮಾಡುತ್ತೇವೆ. ನಿಖಿಲ್‍ಕುಮಾರಸ್ವಾಮಿ ಮೈಸೂರು ಅಥವಾ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡುವುದಿಲ್ಲ. ಸ್ಪರ್ಧಿಸುವುದಾದರೆ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಮುಖಂಡರು ನಮ್ಮ ಕುಟುಂಬದಿಂದಲೇ ಸ್ಪರ್ಧಿಸಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. ತಮ್ಮ ಕುಟುಂಬ ಹೋರಾಟದಿಂದ ಬಂದಂತಹ ಕುಟುಂಬ. ಹಿಂಬಾಗಿಲ ರಾಜಕಾರಣ ಮಾಡಿಲ್ಲ. ನೇರವಾಗಿ ಜನರ ಮುಂದೆ ಹೋಗುತ್ತೇವೆ. ಸೋಲಲಿ, ಗೆಲ್ಲಲಿ ಹೇಡಿತನದ ರಾಜಕಾರಣ ಮಾಡುವುದಿಲ್ಲ. ಹೀಗಾಗಿ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ಮಂಡ್ಯ ಜಿಲ್ಲೆಯ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಜೆಡಿಎಸ್ ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ.

ಕಷ್ಟಕಾಲದಲ್ಲೂ ಜೆಡಿಎಸ್‍ನ್ನು ಜಿಲ್ಲೆಯ ಜನರು ಬೆಂಬಲಿಸುತ್ತಾ ಬಂದಿದ್ದಾರೆ. ಜನರ ಆಶೀರ್ವಾದದಿಂದ ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿದೆ. ಕೆಲವು ವ್ಯಕ್ತಿಗಳು ಮಂಡ್ಯದ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಋಣ ತೀರಿಸುವ ಮಾತುಗಳನ್ನಾಡಿದ್ದಾರೆ. ಯಾರ್ಯಾರು ಎಷ್ಟೆಷ್ಟು ಋಣ ತೀರಿಸಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದರು.

ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ರೋಗ ನಿಯಂತ್ರಣಕ್ಕೆ ಕ್ರಮ:
ಮಂಗನ ಕಾಯಿಲೆ , ಎಚ್1ಎನ್1 ಸೇರಿದಂತೆ ರೋಗಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಇದೇ ವೇಳೆ ತಿಳಿಸಿದರು.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಜೆಟ್‍ನಲ್ಲಿ 10 ಕೋಟಿ ರೂ. ಒದಗಿಸಲಾಗಿದೆ. ಅದೇ ರೀತಿ ಎಚ್1ಎನ್1 ಸೇರಿದಂತೆ ಹಲವು ರೀತಿಯ ಕಾಯಿಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಹಲವು ವರ್ಷಗಳಿಂದಲೂ ಭ್ರಷ್ಟಾಚಾರ ನಡೆಯುತ್ತಾ ಬಂದಿದ್ದು, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ