ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರ ಕೈಗೆ ಚಪ್ಪಲಿಯನ್ನು ನೀಡುವ ಮೂಲಕ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕೆಲಸ ಮಾಡಿಲ್ಲವೆಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳುವ ಮೂಲಕ ವಿನೂತನ ರೀತಿಯ ಪ್ರಚಾರ ಕೈಗೊಂಡಿದ್ದಾರೆ.
ತೆಲಂಗಾಣದ ಕೊರುಟ್ಲಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಮನೆಮನೆಗೆ ಪ್ರಚಾರಕ್ಕೆ ತೆರಳುವಾಗ ಪ್ರತಿಮನೆಯ ಸದಸ್ಯರ ಕೈಗೂ ಚಪ್ಪಲಿಯೊಂದನ್ನು ನೀಡುತ್ತಿದ್ದಾರೆ.
ಟಿಆರ್ಎಸ್ ಮುಖಂಡ ವಿದ್ಯಾಸಾಗರ್ ರಾವ್ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವ ಅಕುಲ ಹನುಮಂತ ಮೆಟ್ಟುಪಲ್ಲಿಯಲ್ಲಿ ಮನೆಮನೆ ಪ್ರಚಾರದಲ್ಲಿ ತೊಡಗಿದ್ದು, ಈ ವೇಳೆ, ಅಲ್ಲಿನ ಗ್ರಾಮಸ್ಥರ ಕೈಗೆ ಚಪ್ಪಲಿ ಕೊಟ್ಟು ಕೈ ಮುಗಿದು ವೋಟ್ ಕೇಳುತ್ತಿದ್ದಾರೆ. ಕೆಲಸ ಮಾಡದಿದ್ದರೆ ಮತ್ತು ಕೊಟ್ಟ ಮಾತಿಗೆ ತಪ್ಪಿದರೆ ನನ್ನನ್ನು ಹೊಡೆಯಿರಿ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕಳೆದ ಕೆಲ ದಶಕಗಳಿಂದಲೂ ಇಲ್ಲಿ ಟಿಆರ್ ಎಸ್ ಪ್ರಭಾವವಿದೆ. ಆದರೆ, ಗೆದ್ದ ಅಭ್ಯರ್ಥಿಗಳಿಂದ ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಹೀಗಾಗಿ ಈ ಬಾರಿ ಖುದ್ದು ತಾವೇ ನಿಂತಿದ್ದು, ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದೇನೆ. ಹೀಗಾದರೂ ಜನರು ತಮ್ಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಲಿ ಎಂಬುದು ನನ್ನ ಉದ್ದೇಶ ಎಂದಿದ್ದಾರೆ.
Telangana, candidate hands out slippers, voters