ನವದೆಹಲಿ: ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬೆಂಬಲ ಸೂಚಿಸಿದ್ದು, ಪಾಕಿಸ್ತಾನವನ್ನೇ ನಿಭಾಯಿಸಲು ಆಗದ ಅವರು ಕಾಶ್ಮೀರವನ್ನು ಹೇಗೆ ಸಂಭಾಳಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಛತ್ತೀಸ್ ಗಢದ ರಾಜಧಾನಿ ರಾಯ್ ಪುರ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನಕ್ಕೆ ನಿಜವಾಗಿಯೂ ಕಾಶ್ಮೀರ ಬೇಕಿಲ್ಲ. ಆದರೆ ರಾಜಕೀಯ ಉದ್ದೇಶದಿಂದ ಕಾಶ್ಮೀರ ವಿಚಾರವನ್ನು ಹಿಡಿದು ಜಗ್ಗಾಡುತ್ತಿದೆ. ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆ ಸರಿಯಾಗಿದೆ. ಪಾಕಿಸ್ತಾನವನ್ನೇ ಸರಿಯಾಗಿ ನಿಭಾಯಿಸದ ಅವರು ಕಾಶ್ಮೀರವನ್ನು ಹೇಗೆ ಸಂಭಾಳಿಸುತ್ತಾರೆ. ಕಾಶ್ಮೀರ ಎಂದೆಂದಿಗೂ ಭಾರತ ದೇಶದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಹೇಳಿದ್ದಾರೆ.
ದುಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಪಾಕಿಸ್ತಾನ ಕಾಶ್ಮೀರಕ್ಕಾಗಿ ಬೇಡಿಕೆ ಇಡಬಾರದು. ಪಾಕ್ ಗೆ ಕಾಶ್ಮೀರದ ನಾಲ್ಕೇ ನಾಲ್ಕು ಪ್ರಾಂತ್ಯಗಳನ್ನೂ ಆಳುವ ಶಕ್ತಿ ಇಲ್ಲ. ಅಲ್ಲದೆ ಕಾಶ್ಮೀರವನ್ನು ಸಮರ್ಥವಾಗಿ ಆಳುವ ತಾಕತ್ತು ಇಲ್ಲ. ಪಾಕಿಸ್ತಾನ ದೇಶವನ್ನು ಏಕೀಕರಿಸಲು ಹಾಗೂ ಉಗ್ರಗಾಮಿಗಳಿಂದ ಸುರಕ್ಷಿತವಾಗಿರಿಸುವಲ್ಲಿ ವಿಫಲವಾಗಿದೆ. ಇನ್ನು ಕಾಶ್ಮೀರದಲ್ಲಿ ಜನರು ಸಾಯುತ್ತಿದ್ದಾರೆ ಇವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ನೋವುಂಟಾಗುತ್ತದೆ. ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ. ಹಾಗಂತ ಭಾರತಕ್ಕೆ ಕಾಶ್ಮೀರವನ್ನು ಬಿಟ್ಟುಕೊಡುವುದು ಬೇಡ. ಕಾಶ್ಮೀರವನ್ನು ಸ್ವತಂತ್ರ ದೇಶ ಮಾಡಿ. ಅಲ್ಲಿನ ಜನರು ಸಾಯುವುದು ಬೇಡ. ಮನುಷ್ಯತ್ವ ಜೀವಂತವಾಗಿರಬೇಕು ಎಂದು ಹೇಳಿದ್ದರು.
ಶಾಹಿದ್ ಅಫ್ರಿದಿ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಸರ್ಕಾರ ಹಾಗೂ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮುಜುಗರ ಉಂಟು ಮಾಡಿದ್ದು, ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Shahid Afridi Is Right, Rajnath Singh,Kashmir