ಕಾರವಾರ: ಮೇ-29: ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತಗೊಂಡಿರುವ ಪರಿಣಾಮ ಧಾರಾಕಾರ ಮಳೆ, ಬಿರುಗಾಳಿ ಬೀಉತ್ತಿದ್ದು, ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಮೀನುಗಾರಿಕೆ ನಡೆಸಿ ತಮಿಳುನಾಡಿಗೆ ವಾಪಸಾಗುತ್ತಿದ್ದ ಮೀನುಗಾರಿಕಾ ದೋಣಿ ಕಡಲ ಕಿನಾರೆಯಿಂದ ಸುಮಾರು 21 ನಾಟಿಕಲ್ ಮೈಲು (ಸುಮಾರು 39 ಕಿ.ಮೀ) ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಇದೇ ವೇಳೆ ಇನ್ನೊಂದು ದೋಣಿ ಕೂಡ ಭಾಗಶಃ ಮುಳುಗಿದೆ ಎಂದು ತಿಳಿದುಬಂದಿದೆ.
ದೋಣಿಗಳನ್ನು ತಮಿಳುನಾಡಿನ ಮೀನುಗಾರರಿಗೆ ಸೇರಿದ ‘ಏಂಜೆಲ್ 1’ ಮತ್ತು ‘ಏಂಜೆಲ್ 2’ ಎಂದು ಗುರುತಿಸಲಾಗಿದೆ. ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಗಳಿಗೆ ಹಾನಿಯಾಗಿರುವ ಕಾರಣ ಅವಘಡ ನಡೆದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಸಂತೋಷ್ ಕೊಪ್ಪದ, ಎರಡು ದೋಣಿಗಳಲ್ಲಿ ಆರು ಮೀನುಗಾರರು ಪ್ರಯಾಣಿಸುತ್ತಿದ್ದರು. ಅವರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಇಬ್ಬರಿಗೆ ಹುಡುಕಾಟ ಮುಂದುವರಿದಿದೆ. ಒಂದು ದೋಣಿ ಸಂಪೂರ್ಣ ಮುಳುಗಿದೆ. ಮತ್ತೊಂದು ಸಮುದ್ರ ಮಧ್ಯದಲ್ಲಿ ನಿಂತಿದೆ ಎಂದು ತಿಳಿಸಿದ್ದಾರೆ.
ಕರಾವಳಿ ರಕ್ಷಣಾ ಪಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಸ್ಥಳೀಯ ಮೀನುಗಾರರೂ ಸಂಕಷ್ಟದಲ್ಲಿರುವವರ ರಕ್ಷಣೆಗೆ ಧಾವಿಸಿದ್ದಾರೆ.