ಸಾಲಮನ್ನಾ ಕ್ರೆಡಿಟ್‌ಗಾಗಿ ಕಿತ್ತಾಟ: ಮುಂದುವರಿದ ಖಾತೆ ಕ್ಯಾತೆ, ಕುಮರಾಸ್ವಾಮಿ ಅಸಮಾಧಾನ

ಬೆಂಗಳೂರು/ಹೊಸದಿಲ್ಲಿ,ಮೇ 29

ಕಳೆದ ಬುಧವಾರವೇ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ರಚನೆಯಾಗಿದೆ. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್‌ ಪ್ರಮಾಣವಚನ ಸ್ವೀಕರಿಸಿದ್ದರು.
ಆದರೆ ಪ್ರಮಾಣ ಸ್ವೀಕರಿಸಿ ಒಂದು ವಾರ ಕಳೆದರೂ ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಈ ನಡುವೆ ಕಾಂಗ್ರೆಸ್ ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದೆ. ಕಾಂಗ್ರೆಸ್‌ ನಾಯಕರ ಈ ಧೋರಣೆಗೆ ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್‌ ಹಣಕಾಸು ಖಾತೆ ಬಿಟ್ಟು ಬೇರೆ ಖಾತೆಗಳಿಗೆ ಯಾವುದೇ ಪಟ್ಟು ಹಿಡಿದಿಲ್ಲ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಹಣಕಾಸು ಇಲಾಖೆಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಆಪ್ತರಿಗೆ ಈ ಖಾತೆ ಕೊಡಿಸಬೇಕು ಎಂಬುದು ಸಿದ್ದರಾಮಯ್ಯ ಬಯಕೆ ಎನ್ನಲಾಗಿದೆ.
ಇದರಿಂದ ತೀವ್ರ ಕೋಪಗೊಂಡಿರುವ ಗುಲಾಂ ನಬಿ ಆಜಾದ್‌ ರಾಜ್ಯ ಕಾಂಗ್ರೆಸ್‌ ನಾಯಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲು ನಾವೇ ಬೇಷರತ್ತ ಬೆಂಬಲ ನೀಡುವುದಾಗಿ ಹೇಳಿದ್ದೇವೆ. ಆದರೆ, ಈಗ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ರಾಜ್ಯ ಕಾಂಗ್ರೆಸ್‌ ನಾಯಕರು ಮಾತ್ರ ತಮಗೆ ಪ್ರಮುಖ ಖಾತೆಗಳು ಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಇದರಿಂದ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.
ಸಿಎಂ ಕುಮಾರಸ್ವಾಮಿ ಅಸಮಾಧಾನ…? 
ಈ ನಡುವೆ ಕಾಂಗ್ರೆಸ್‌ ನಾಯಕರ ನಡೆಗೆ ಸಿಎಂ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ನವರೇ ಬಂದು ಬೇಷರತ್ತ ಬೆಂಬಲ ಘೋಷಿಸಿದ್ದರು. ಸಮಾನವಾಗಿ ಸಚಿವ ಸ್ಥಾನ ಹಂಚಿಕೊಳ್ಳುವ ಮಾತನಾಡಿದ್ದರು. ಆದರೆ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್‌ ನಾಯಕರ ವರಸೆ ಬದಲಾಗಿದೆ ಎಂದು ಆಪ್ತರ ಬಳಿ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ