ನವದೆಹಲಿ:ಏ-೨೬: ರೆಡ್ಡಿ ಸಹೋದರರು ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರೆಡ್ಡಿ ಸಹೋದರರು ಮತ್ತು ಬಿಎಸ್ ಯಡಿಯೂರಪ್ಪ ಗಣಿ ಸಂಪತ್ತನ್ನು ಲೂಟಿ ಮಾಡಿದರು. ನಮ್ಮ ಸರ್ಕಾರ ಅವರನ್ನು ಜೈಲಿಗಟ್ಟಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅವರನ್ನು ಜೈಲಿನಿಂದ ಹೊರಗೆ ತರುವ ಪ್ರಯತ್ನ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಟೀಕಾ ಪ್ರಹಾರ ನಡೆಸಿರುವ ರಾಹುಲ್ ಗಾಂಧಿ, ಅಧಿಕಾರದಲ್ಲಿದ್ದಾಗ ಬಿಎಸ್ವೈ ಹಾಗೂ ರೆಡ್ಡಿ ಬ್ರದರ್ಸ್ ಕರ್ನಾಟಕವನ್ನು ಲೂಟಿ ಮಾಡಿದ್ರು. ಕಾಂಗ್ರೆಸ್ ಸರ್ಕಾರ ಅವರನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಿತ್ತು. ಮೋದಿಯಿಂದ ಅಂತಹ 8 ಮಂದಿಯನ್ನು ವಿಧಾನಸಭೆಗೆ ತರುವ ಯತ್ನ ನಡೆಯುತ್ತಿದೆ. ಇದು ಪ್ರಾಮಾಣಿಕ, ನಾಗರಿಕರಿಗೆ, ಕರ್ನಾಟಕದಲ್ಲಿ ಬಸವಣ್ಣನವರ ತತ್ವಕ್ಕೆ ಅವಮಾನ’ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಇದೇ ವಿಚಾರವಾಗಿ ಟ್ವೀಟ್ ಸಮರ ಆರಂಭಿಸಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯದ ಗಣಿ ಸಂಪತನ್ನು ಲೂಟಿ ಮಾಡಿದ ಬಳ್ಳಾರಿ ಗಣಿ ಧಣಿಗಳ ಗ್ಯಾಂಗ್ ರಕ್ಷಣೆಗೆ ಮೋದಿ ಸರ್ಕಾರ ಧಾವಿಸಿದೆ. ರಾಜ್ಯದ ಸುಮಾರು 35 ಸಾವಿರ ಕೋಟಿ ಗಣಿ ಸಂಪತ್ತನ್ನು ಲೂಟಿ ಮಾಡಿದ ಬಳ್ಳಾರಿ ರೆಡ್ಡಿಗಳಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕನ್ನಡಿಗರಿಗೆ ಬಿಜೆಪಿ ದ್ರೋಹ ಮಾಡಿದೆ. ಮೋದಿ ಸರ್ಕಾರ ಸಿಬಿಐ ಮೂಲಕ ಗಣಿ ಧಣಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಕಿಡಿಕಾರಿದ್ದರು.
ಇದೀಗ ಅದರ ಮುಂದುವರಿದ ಭಾಗವಾಗಿ ರಾಹುಲ್ ಟ್ವೀಟ್ ಮಾಡಿದ್ದಾರೆ. ಮತ್ತೊಮ್ಮೆ ಗಣಿ ಅಕ್ರಮವನ್ನು ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ.
Karnataka Assembly Election, Rahul Gandhi, tweet War, reddy brothers,BJP