ಮಂಡ್ಯ: ಮಾಜಿ ಸಂಸದ, ಕಾವೇರಿ ಹೋರಾಟಗಾರ, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ. ಮಾದೇಗೌಡ ಅವರು ಶನಿವಾರ ಸಂಜೆ ಮದ್ದೂರು ತಾಲೂಕು ಭಾರತೀನಗರದ ಜಿ. ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಹಿರಿಯ ಗಾಂವಾದಿ ಜಿ. ಮಾದೇಗೌಡ ಅವರು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಭಾರತೀನಗರದ ಜಿ. ಮಾದೇಗೌಡರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ವಿಕ್ರಂ ಆಸ್ಪತ್ರೆ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದರು.
ಕಳೆದ ಮೂರ್ನಾಲ್ಕು ದಿನದಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಆದರೆ , ಶನಿವಾರ ಬೆಳಗಿನಿಂದ ಗಂಭೀರ ಸ್ಥಿತಿಗೆ ತಲುಪಿದ್ದರೆನ್ನಲಾಗಿದೆ.
ಮಂಡ್ಯದ ನಿವಾಸಕ್ಕೆ ಪಾರ್ಥೀವ ಶರೀರ :
ಪಾರ್ಥೀವ ಶರೀರವನ್ನು ಬೆಳಗ್ಗೆ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು. ಬೆಳಗ್ಗೆ 10ಕ್ಕೆ ನಗರದ ಗಾಂ ಭವನದ ಬಳಿ ಕೊಂಡೊಯ್ದು 15 ನಿಮಿಷ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಬೂದನೂರು, ಹನಕೆರೆ, ಗೆಜ್ಜಲಗೆರೆ, ಮದ್ದೂರು ಮಾರ್ಗವಾಗಿ ಕಾಳಮುದ್ದನದೊಡ್ಡಿಗೆ ತರಲಾಗುವುದು. ಭಾರತೀ ಕಾಲೇಜಿನ ಆವರಣದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 2.30ಕ್ಕೆ ಹನುಮಂತನಗರಕ್ಕೆ ತಂದು ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಭಾರತೀ ಶಿಕ್ಷಣ ಟ್ರಸ್ಟ್ ಉಪಾಧ್ಯಕ್ಷ ನಂಜೇಗೌಡ ತಿಳಿಸಿದ್ದಾರೆ.