ಬೆಂಗಳೂರು,ಜು.14-ವಾಯುಭಾರ ಕುಸಿತದ ಪರಿಣಾಮ ನಿನ್ನೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬೀಳುತ್ತಿರುವ ಜಿಟಿಜಿಟಿ ಮಳೆ ಇಂದು ಕೂಡ ಮುಂದುವರೆದಿತ್ತು.
ನಿನ್ನೆ ಸಂಜೆಯವರೆಗೂ ಆಗಾಗ್ಗೆ ತುಂತುರು ಇಲ್ಲವೇ ಹಗುರ ಮಳೆಯಾಗಿ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿತ್ತು. ಅದೇ ರೀತಿ ಇಂದು ಕೂಡ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಆರಂಭವಾಗಿತ್ತು.
ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವ ಜನರುಛತ್ರಿ, ಜರ್ಕಿನ್ ರೈನ್ಕೋಟ್ ಮೊದಲಾದವುಗಳ ಆಸರೆ ಪಡೆಯಬೇಕಾಯಿತು.
ಹವಾಮಾನ ಮುನ್ಸೂಚನೆ ಪ್ರಕಾರ ಈ ವಾರದ ಅಂತ್ಯದವರೆಗೂ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ರಾಜ್ಯದ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಕರಾವಳಿ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾದ ವರದಿಯಾಗಿದ್ದು, ಉಳಿದಂತೆ ಕೆಲವೆಡೆ ಉತ್ತಮ ಮಳೆ ಇನ್ನು ಕೆಲವೆಡೆ ಹಗುವಾದ ಸಾಧಾರಣ ಮಳೆಯಾಗಿರುವ ವರದಿಯಾಗಿದೆ.
ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಒಳನಾಡಿನಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ಮುಂಗಾರು ಹಂಗಾಮಿನ ಬಿತ್ತನೆ ಕಾಲವಾಗಿರುವುದರಿಂದ ಮಳೆ ಮುಂದುವರೆಯುತ್ತಿರುವುದು ರೈತ ಸಮುದಾಯದಲ್ಲಿ ಹರ್ಷವನ್ನು ಉಂಟು ಮಾಡಿದೆ.
ಕಾವೇರಿ ಹಾಗೂ ತುಂಗಭದ್ರ ನದಿಯ ಜಲಾಶಯಗಳ ಒಳಹರಿವಿನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.
ಮಳೆ ಕೊರತೆ: ಜು.1ರಿಂದ ಜು.13ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಒಟ್ಟಾರೆ ಶೇ.38ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಮತ್ತು ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ಜೂ.1ರಿಂದಲೂ ಜು.13ರವರೆಗೆ ರಾಜ್ಯದಲ್ಲಿ ಒಟ್ಟಾರೆ ಶೇ.14ರಷ್ಟು ಮಳೆ ಕೊರತೆ ಉಂಟಾಗಿದೆ. ರಾಜ್ಯದ ಕರಾವಳಿ ಹಾಗೂ ಒಳನಾಡಿನಲ್ಲಿ ಮಳೆಯಾಗುತ್ತಿದ್ದರೂ ತೃಪ್ತಿದಾಯಕವಾಗಿಲ್ಲ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ ಎಂದರು.
ಇನ್ನೊಂದು ವಾರ ಇದೇ ರೀತಿ ಕರಾವಳಿ ಭಾಗದಲ್ಲಿ ಹೆಚ್ಚು ಹಾಗೂ ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆ ಮುಂದುವರೆಯುವ ಲಕ್ಷಣಗಳಿವೆ. ಮಳೆಯ ಈ ರೀತಿಯ ಅನಿಶ್ಚಿತತೆಯಿಂದ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಬೇಕೆ, ಮಾಡಬೇಡವೆ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.
ಜುಲೈ 1ರಿಂದ ಜು.13ರವರೆಗೆ ಅತಿಹೆಚ್ಚು ಮಳೆಯಾಗುತ್ತಿದ್ದ ಕರಾವಳಿಯಲ್ಲಿ ಶೇ.57ರಷ್ಟು, ಮಲೆನಾಡಿನಲ್ಲಿ ಶೇ.72ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಳೆದ ಒಂದು ವಾರದಿಂದ ಒಳನಾಡಿನಲ್ಲಿ ಮಳೆ ಚೇತರಿಕೆ ಕಂಡಿದ್ದರೂ ಜನರ ಆತಂಕ ದೂರವಾಗಿಲ್ಲ. ಒಟ್ಟಾರೆ ತೃಪ್ತಿಕರವಾದ ಮಳೆಯಾಗುತ್ತಿಲ್ಲ. ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಅಲ್ಲಲ್ಲಿ ಮಾತ್ರ ಮಳೆಯಾಗುತ್ತಿದೆ.
ಕಳೆದ ಒಂದು ವಾರದಲ್ಲಿ ಧಾರವಾಡ, ಹಾವೇರಿ, ಮೈಸೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಮರ್ಪಕವಾದ ಮಳೆಯಾಗಿಲ್ಲ. ಜುಲೈ ಅಂತ್ಯದವರೆಗೂ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಗೋಚರಿಸುತ್ತಿಲ್ಲ. ಜುಲೈನಲ್ಲಿ ಸಹಜವಾಗಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುವುದು ವಾಡಿಕೆ ಎಂದು ಅವರು ತಿಳಿಸಿದರು.