ಕರ್ನಾಟಕಕ್ಕೆ ಬಿಗ್ ರಿಲೀಫ್: ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು; ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಪು

ನವದೆಹಲಿ: ಇಂದು ದೆಹಲಿಯಲ್ಲಿ ನಡೆದಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ನಿರ್ಧಾರ ಕೈಗೊಳ್ಳಲಾಗಿದೆ.

ಇಂದಿನ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು.  ಜುಲೈ ತಿಂಗಳ ನೀರನ್ನೂ ಬಿಡುವಂತೆ ತಮಿಳುನಾಡು ಬೇಡಿಕೆಯಿಟ್ಟಿತ್ತು. ಆದರೆ, ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿರುವುದರಿಂದ ಕರ್ನಾಟಕಕ್ಕೆ ಬಿಗ್ ರಿಲೀಫ್​ ಸಿಕ್ಕಂತಾಗಿದೆ.

ಕಡೆಗೂ ರಾಜ್ಯದ ಪರ ಕಾವೇರಿ ನಿರ್ವಹಣಾ ಪ್ರಾಧಿಕಾರ ಕರುಣೆ ತೋರಿದ್ದು, ತಮಿಳುನಾಡು ಒಟ್ಟು 40.43 ಟಿಎಂಸಿ ನೀರು ಕೇಳಿತ್ತು. ಜೂನ್ ತಿಂಗಳ 9.19, ಜುಲೈ ತಿಂಗಳ 31.24 ಟಿಎಂಸಿ ನೀರು ಬಿಡುವಂತೆ ಕೋರಿತ್ತು. ಆದರೆ ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆ ಆಗಿಲ್ಲ. ಮಳೆ ಇಲ್ಲದ ಕಾರಣ ನೀರು ಬಿಡಲು ಸಾಧ್ಯವಿಲ್ಲ ಎಂದು ಪ್ರಾಧಿಕಾರಕ್ಕೆ ಕರ್ನಾಟಕ ಮನವರಿಕೆ ಮಾಡಿಕೊಟ್ಟಿತ್ತು. ರಾಜ್ಯದ ಪರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ವಾದ ಮಂಡಿಸಿದ್ದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ನೇತೃತ್ವದಲ್ಲಿ ಸಭೆ ನಡೆದಿದೆ. ಮೆಟ್ಟೂರು ಅಣೆಕಟ್ಟೆಯಿಂದ ಈವರೆಗೂ ನೀರು ಬಿಟ್ಟಿಲ್ಲ. ತಮ್ಮ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸಿಲ್ಲ. ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ತಮಿಳುನಾಡಿನ ರೈತರಿಗೆ ಕಾವೇರಿ ನೀರೇ ಆಸರೆ. ಕುರುವೈ ಬೆಳೆಗಾಗಿ ಮೆಟ್ಟೂರು ಡ್ಯಾಂ ಅವಲಂಬಿಸಲಾಗಿದೆ. ಕಳೆದ ಸಭೆಯಲ್ಲಿ 9.19 ಟಿಎಂಸಿ ಹರಿಸಲು ಸೂಚನೆ ನೀಡಲಾಗಿತ್ತು. ಆದರೆ ಕರ್ನಾಟಕ ಪ್ರಾಧಿಕಾರದ ಸೂಚನೆಯನ್ನು ಪಾಲಿಸಿಲ್ಲ. ಜೂನ್ 30ರೊಳಗೆ ಸಂಪೂರ್ಣ ನೀರು ಬಿಡಬೇಕು ಎಂದು ಸಭೆಯಲ್ಲಿ ತಮಿಳುನಾಡು ಪರ ವಾದ ಮಂಡನೆ ಮಾಡಿತ್ತು.

ಕಾವೇರಿ‌ ಕೊಳ್ಳದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಮಳೆ ಆಗಿಲ್ಲದಿರುವುದರಿಂದ ಜಲಾಶಯಗಳಲ್ಲಿ ನೀರಿಲ್ಲ. ರಾಜ್ಯದಲ್ಲೇ ಬೆಳೆಗಳಿಗೆ ಮತ್ತು ಕುಡಿಯಲು ನೀರಿಲ್ಲ. ನೀರಿಲ್ಲದೇ ಇರುವುದರಿಂದ ನೀರು ಬಿಡಲು ಸಾಧ್ಯವಿಲ್ಲ. ಮುಂದೆ ಮಳೆ ಚೆನ್ನಾಗಿ ಬಂದರಷ್ಟೇ ನೀರು ಬಿಡಲಾಗುವುದು ಎಂದು ಕರ್ನಾಟಕದ ಪ್ರತಿನಿಧಿ ರಾಕೇಶ್​ ಸಿಂಗ್ ತಮ್ಮ ನಿಲುವು ಪ್ರಕಟಿಸಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ಕರ್ನಾಟಕದ ಪರವಾಗಿ ತೀರ್ಪು ಹೊರಬಿದ್ದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ