ಶಾಶ್ವತ ಪರಿಹಾರಕ್ಕೆ ಅಭಿಪ್ರಾಯ ಸಂಗ್ರಹಿಸಿ: ಡಿಸಿಎಂ ಸವದಿ

ರಾಯಚೂರು: ಕೃಷ್ಣ ಮತ್ತು ಭೀಮಾ ನದಿಯ ಸಂಗಮವಾಗುವ ಗುರ್ಜಾಪುರ ಗ್ರಾಮ ಮಳೆಗಾಲ ಹಾಗೂ ನೆರೆಯ ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಸಿದ ಸಂದರ್ಭದಲ್ಲಿ ಪ್ರವಾಹದ ಸ್ಥಿತಿ ಏರ್ಪಡುತ್ತದೆ. ಗ್ರಾಮಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮ ಸಭೆ ನಡೆಸಿ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಸೋಮವಾರ ಕೃಷ್ಣ ಮತ್ತು ಭೀಮಾ ನದಿಯ ಸಂಗಮವಾಗುವ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‍ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಗುರ್ಜಾಪೂರು ಗ್ರಾಮವನ್ನು ನದಿ ಪಾತ್ರದಿಂದ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರದಲ್ಲಿ ಭಿನ್ನಾಭಿಪ್ರಾಯ ಇದೆ,. ಆದ ಕಾರಣ ಗ್ರಾಮದಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಗ್ರಾಮ ಸಭೆ ನಡೆಸಿ, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ಮಳೆ, ಪ್ರವಾಹದಿಂದ ಪ್ರತಿ ಭಾರಿ ಗುರ್ಜಾಪೂರು ಸೇರಿ ನಾಲ್ಕು ಗ್ರಾಮಗಳು ಪ್ರವಾಹ ಎದುರಿಸಬೇಕಾಗಿದೆ. ಅರಿಶಿಣಿಗೆ, ಡಿ.ಡೋಂಗರಾಂಪೂರು, ಅತ್ಕೂರು, ಬೂರ್ದಿಪಾಡು ಗ್ರಾಮದ ನದಿ ತೀರದ ಜನರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ ಎಂದರು.
ಕಳೆದ ಎರಡು ಮೂರು ದಿನಗಳಿಂದ ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ ಎಂಬುದಕ್ಕೆ ಕುರಿತಂತೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಮಹಾರಾಷ್ಟ್ರದ ಅಕಾರಿಗಳು ನೀಡಿರುವ ಮಾಹಿತಿ ತಪ್ಪಾಗಿರಬಹುದು. ಅವರು ನೀರಿನ ಹರಿವಿಗೆ ಸಂಬಂಸಿದಂತೆ ನೀಡಿದ ಮಾಹಿತಿ ಸಮಪರ್ಕವಾಗಿಲ್ಲ, ಅವರು ನೀಡಿರುವ ಮಾಹಿತಿ ನಿಖರವಾಗಿದ್ದರೆ, ಈ ವೇಳೆಗಾಗಲೇ ನೀರು ಹರಿದು ಬರಬೇಕಿತ್ತು. ಈ ಕುರಿತಂತೆ ಮಹಾರಾಷ್ಟ್ರದ ನೀರಾವರಿ ಸಚಿವರೊಂದಿಗೆ ಮಾತನಾಡಲಾಗಿದೆ. ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಕಾರಿಗಳು ನೀರು ಹರಿಸುವಿಕೆಗೆ ಸಂಬಂಸಿದಂತೆ ತಪ್ಪು ಮಾಹಿತಿ ನೀಡುತ್ತಿದ್ದು, ಈ ಕುರಿತು ಪರಿಶೀಲಿಸುವಂತೆ ತಿಳಿಸಲಾಗಿದೆ ಎಂದರು.
ಅತಿ ಹೆಚ್ಚು ಮಳೆ ಹಾಗೂ ನೆರೆಯಿಂದಾಗಿ ಜಿಲ್ಲೆಯ ವಿವಿಧೆಡೆ ಬೆಳೆಹಾನಿಯಾಗಿದೆ. ಹಾನಿ ಕುರಿತು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಜಿಲ್ಲೆಯ ಪ್ರವಾಹ ಸ್ಥಿತಿ ಗತಿಗಳ ಕುರಿತು ಅಕಾರಿಗಳಿಂದ ನಿರಂತರವಾಗಿ ಮಾಹಿತಿ ಪಡೆಯಲಾಗುತ್ತಿದೆ, ಭತ್ತ, ಹತ್ತಿ ಬೆಳೆ ನಾಶಕ್ಕೆ ಸಂಬಂಸಿದಂತೆ ಸಮೀಕ್ಷಾ ಕಾರ್ಯ ಕೈಗೊಂಡು ಪರಿಹಾರ ನೀಡಲಾಗುತ್ತದೆ ಎಂದರು.
ಈಗಾಗಲೇ ನಿರ್ಮಿಸಲಾಗಿರುವ ಪುನರ್ ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಜನರು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಗುರ್ಜಾಪೂರು ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಸ್ಥಳಾಂತರಿಸಿ ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಜರುಗಿಸಲಾಗುತ್ತದೆಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ