ಕಾಸರಗೋಡು: ಕೋವಿಡ್ ವೈರಸ್ ಸೋಂಕು ತಡೆಗಟ್ಟುವ ಉದ್ದೇಶದಿಂದ ಏರ್ಪಡಿಸಿದ ಲಾಕ್ಡೌನ್ ನಿಯಂತ್ರಣದಿಂದ ಕೇರಳದ 10ರಿಂದ 15 ಲಕ್ಷ ಮಂದಿಯ ಉದ್ಯೋಗ ನಷ್ಟಗೊಂಡಿರುವುದಾಗಿ ಅಂದಾಜಿಸಲಾಗಿದೆ. ಈ ಹಿಂದೆ ಕುವೈಟ್ ಯುದ್ಧದ ಸಂದರ್ಭ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದ 1.70 ಲಕ್ಷ ಕೇರಳೀಯರು ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳಿದ್ದರು.
ಕೊಲ್ಲಿ ರಾಷ್ಟ್ರಗಳಲ್ಲಿರುವ ಕೇರಳೀಯರಿಂದ ರಾಜ್ಯದ ಕೈಗಾರಿಕೆ, ಕೃಷಿ , ಬ್ಯಾಂಕ್ ಠೇವಣಿಗಳು, ರಿಯಲ್ ಎಸ್ಟೇಟ್, ಸಹಕಾರಿ ಸಂಘಗಳಲ್ಲಿನ ಠೇವಣಿ, ನಿರ್ಮಾಣ ವಲಯದ ಅಭಿವೃದ್ಧಿ ಇತ್ಯಾದಿಗಳಿಗೆ ಉತ್ತೇಜನ ಲಭಿಸುತ್ತಿದೆ. ಈ ಮೂಲಕ ಕೇರಳದ ಸಮಗ್ರ ಅಭಿವೃದ್ಧಿಗೆ ಪ್ರತೀ ವರ್ಷ ಸಾವಿರಾರು ಕೋಟಿ ರೂಪಾಯಿ ಹರಿದು ಬರುತ್ತಿದೆ. ಆದರೆ ಕುವೈಟ್ ಯುದ್ಧದ ಸಮಸ್ಯೆಯೇ ಪೂರ್ಣಪ್ರಮಾಣದಲ್ಲಿ ಸರಿಯಾಗಿಲ್ಲ. ಇದೀಗ ಅದರೊಂದಿಗೆ ಮಾಹಾಮಾರಿ ಕೊರೋನಾ ಸೋಂಕು ವಕ್ಕರಿಸಿ ಮತ್ತಷ್ಟು ವಲಯಗಳಿಗೆ ಹೊಡೆತ ನೀಡುತ್ತಿದೆ.
ಜೂ. 18 ರಂದು ಕೇರಳ ಸರಕಾರವು ಬಿಡುಗಡೆ ಮಾಡಿದ ವರದಿಯಂತೆ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಎಷ್ಟು ಮಂದಿಗೆ ಮರಳಿ ಉದ್ಯೋಗ ದೊರಕಲಿದೆ ಎಂಬ ಪ್ರಶ್ನೆಗೆ ಸರಕಾರದ ಬಳಿ ನಿಖರವಾದ ಮಾಹಿತಿಯಿಲ್ಲ.
ಇದೇ ವೇಳೆ ನೋರ್ಕಾ ಇಲಾಖೆಯು ನೀಡಿದ ಅಂಕಿ ಅಂಶದಂತೆ 14.63 ಲಕ್ಷ ಕೇರಳೀಯರು ಕೋವಿಡ್ ಲಾಕ್ಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾರೆ.
ವಿದೇಶಗಳಿಂದ ಉದ್ಯೋಗ ನಷ್ಟಗೊಂಡು ಊರಿಗೆ ಬಂದವರಿಗೆ ರಾಜ್ಯ ಸರಕಾರದ ವತಿಯಿಂದ 5 ಸಾವಿರ ರೂಪಾಯಿ ಪರಿಹಾರ ಲಭಿಸುತ್ತದೆ. ಆದರೆ ಬಹುತೇಕ ಮಂದಿ ಈ ಪರಿಹಾರ ಮೊತ್ತವನ್ನು ಪಡೆಯಲು ಸಿದ್ಧರಾಗುತ್ತಿಲ್ಲ. ಸರಕಾರದ ಲೆಕ್ಕಾಚಾರದಂತೆ ಈ ವರೆಗೆ 1.70 ಲಕ್ಷ ಜನರು ಮಾತ್ರ ಪರಿಹಾರ ಧನ ಪಡೆದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೇರಳಕ್ಕೆ ವಿದೇಶಿ ಹಣ ಸಾಕಷ್ಟು ಪ್ರಮಾಣದಲ್ಲಿ ಹರಿದುಬಂದಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವವರು ರಾಜ್ಯಕ್ಕೆ ಈ ಹಣ ಕಳುಹಿಸಿದ್ದರು. 2018ರಲ್ಲಿ 1,86,376 ಕೋಟಿ ರೂ., 2019ರಲ್ಲಿ 2,09,781 ಕೋಟಿ ರೂ., 2020ರಲ್ಲಿ 2,27,430 ಕೋಟಿ ರೂ. ಹಣವು ರಾಜ್ಯಕ್ಕೆ ಅನಿವಾಸಿ ಕೇರಳೀಯರಿಂದ ದೊರಕಿದೆ. ಆದರೆ ಕೋವಿಡ್ನಿಂದಾಗಿ ಬಹುತೇಕ ಮಂದಿಗೆ ಉದ್ಯೋಗ ನಷ್ಟಗೊಂಡರೆ ಪ್ರಸಕ್ತ ವರ್ಷದಲ್ಲಿ ಈ ಆದಾಯ ಹರಿವಿನಲ್ಲಿ ಕುಸಿತ ಉಂಟಾಗಲಿದೆ.