ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದಂದು ಸಂಭವಿಸಿದ ಹಿಂಸಾಚಾರದ ಸಂದರ್ಭದಲ್ಲಿ ಗರಿಷ್ಠ ಸಂಯಮವನ್ನು ಕಾಯ್ದುಕೊಂಡಿದ್ದಕ್ಕಾಗಿ ದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಅವರು ತಮ್ಮ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.
ರೈತರ ಚಳವಳಿಯು ಹಿಂಸಾಚಾರಕ್ಕೆ ತಿರುಗಿದಾಗ ನೀವು ಅತ್ಯಂತ ಹೆಚ್ಚಿನ ತಾಳ್ಮೆಯನ್ನು ವಹಿಸಿದ್ದೀರಿ. ಗಲಭೆಯಲ್ಲಿ ನಮ್ಮ 394 ಸ್ನೇಹಿತರು ಗಾಯಗೊಂಡರು. ಅವರಲ್ಲಿ ಕೆಲವರು ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ ಕೆಲವರನ್ನು ಭೇಟಿಯಾಗಿದ್ದೇನೆ, ಅವರಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.
ಮುಂಬರುವ ದಿನಗಳು ನಮಗೆಲ್ಲ ಬಹಳ ಸವಾಲಿನದ್ದಾಗಿರಲಿವೆ ಎಂದು ತಿಳಿಯಲು ಬಯಸುತ್ತೇನೆ. ಹೀಗಾಗಿ ನಾವು ಎಚ್ಚರಿಕೆಯಿಂದಿರಬೇಕು. ನಾವು ಶಿಸ್ತಿನ ಜತೆಗೆ ತಾಳ್ಮೆಯಿಂದಿರಬೇಕಿದೆ. ನಿಮ್ಮ ತಾಳ್ಮೆಗಾಗಿ ನಿಮಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಸಿಬ್ಬಂದಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜನವರಿ 26ರಂದು ರೈತರ ಆಂದೋಲನವು ಉಗ್ರ ಸ್ವರೂಪ ಪಡೆದು ಹಿಂಸಾತ್ಮಕವಾದರೂ ನೀವು ಅತ್ಯಂತ ಸಂಯಮ ಮತ್ತು ತಾಳ್ಮೆಯಿಂದ ಕಾರ್ಯನಿರ್ವಹಿಸಿದ್ದೀರಿ. ಆ ವೇಳೆ ನಮ್ಮ ಬಳಿ ಬಲ ಪ್ರಯೋಗ ನಡೆಸಲು ಅವಕಾಶವಿತ್ತಾದರೂ, ನಾವು ಸಂಯಮದಿಂದ ವರ್ತಿಸಿದ್ದೇವೆ. ನಿಮ್ಮ ಈ ವರ್ತನೆ ಮೇಲ್ಪಂಕ್ತಿಯಾಗಿರಲಿದೆ ಎಂದಿದ್ದಾರೆ.