ಹೊಸದಿಲ್ಲಿ: ಭೂಸೇನೆ, ನೌಕಾದಳ, ವಾಯದಳಗಳಲ್ಲಿ ತರಬೇತಿ ಪಡೆಯುತ್ತಿರುವ ಒಂದು ಲಕ್ಷ ನ್ಯಾಷನಲ್ ಕೆಡೆಟ್ ಕಾಪ್ರ್ಸ್ (ಎನ್ಸಿಸಿ) ಅಭ್ಯರ್ಥಿಗಳು ಕರಾವಳಿ ಮತ್ತು ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಿಲ್ಲಿಯ ಕಾರ್ಯಪ್ಪ ಮೈದಾನದಲ್ಲಿ ಅವರು ಗುರುವಾರ ಎನ್ಸಿಸಿ ರ್ಯಾಲಿ ಉದ್ದೇಶಿಸಿ ಮಾತನಾಡಿ, ಕರಾವಳಿ ಮತ್ತು ಗಡಿ ಪ್ರದೇಶಗಳ ಸುಮಾರು 175 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಹೊಣೆ ನೀಡಲಾಗುವುದೆಂದು ಕಳೆದ ವರ್ಷದ ಆಗಸ್ಟ್ 15ರಂದು ಪ್ರಕಟಿಸಲಾಗಿತ್ತು. ಇದರ ಹಿನ್ನೆಲೆಯಲ್ಲಿ ಲಕ್ಷ ಎನ್ಸಿಸಿ ಅಭ್ಯರ್ಥಿಗಳಿಗೆ ಭೂಸೇನೆ, ನೌಕಾದಳ ಮತ್ತು ವಾಯುದಳಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಮೂರನೇ ಒಂದು ಭಾಗದಷ್ಟು ವಿದ್ಯಾರ್ಥಿನಿಯರು ಎಂದು ಪ್ರಧಾನಿ ಮೋದಿ ಹೇಳಿದರು.
ರಕ್ಷಣಾ ಸಚಿವ ರಾಜನಾಥ ಸಿಂಗ್, ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಮತ್ತು ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು. ಪ್ರಧಾನಿ ಮೋದಿ ಎನ್ಸಿಸಿ ಕ್ಯಾಪ್ ಧರಿಸಿ ಎನ್ಸಿಸಿ ತುಕಡಿಗಳ ಪಥಸಂಚಲನ ಪರಿಶೀಲಿಸಿದರು.