ಬೆಂಗಳೂರು: ಸರಿಸುಮಾರು ಆರು ತಿಂಗಳ ನಂತರ ಸಂಪುಟ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಖಾತೆ ಹಂಚಿಕೆ ಕುರಿತಂತೆ ಒತ್ತಡಗಳು ಹೆಚ್ಚುತ್ತಿದ್ದು, ಒಂದೆರಡು ದಿನದಲ್ಲಿ ಹೊಸ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ.
ಇಷ್ಟು ದಿನ ಸಂಪುಟ ವಿಸ್ತರಣೆಯೋ, ಸಂಪುಟ ಪುನಾರಚನೆಯೋ ಎಂಬ ಕುತೂಹಲವಿತ್ತು. ಇದೀಗ ಈ ಎಲ್ಲಾ ಕುತೂಹಲಕ್ಕೆ ತೆರೆಬಿದ್ದಿದ್ದು, ಇನ್ನೀಗ ಖಾತೆಗಳು ಅದಲು-ಬದಲಾಗಲಿವೆ ಎಂಬ ಕೌತುಕ ಸೃಷ್ಟಿಯಾಗಿದೆ.
ಕೆಲ ಪ್ರಮುಖ ಖಾತೆಗಳನ್ನು ಹೊರತುಪಡಿಸಿ, ಒಂದಿಬ್ಬರು ಸಚಿವರ ಖಾತೆಗಳು ಅದಲು-ಬದಲಾಗುವ ಸಾಧ್ಯತೆಗಳಿದ್ದು, ಹೆಚ್ಚುವರಿ ಖಾತೆಗಳು ನೂತನ ಸಚಿವರಿಗೆ ಹಂಚಿಕೆಯಾಗಲಿವೆ.
ಪ್ರಮುಖವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಹಣಕಾಸು, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ, ಯೋಜನೆ, ವಾರ್ತಾ, ಸಣ್ಣ ಕೈಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿದ್ದು, ಸಿ.ಟಿ. ರವಿ ಅವರ ರಾಜೀನಾಮೆಯಿಂದಾಗಿ ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನಸೇವೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಖಾತೆಗಳೂ ಸಿಎಂ ಬಳಿಯೇ ಇವೆ.
ನೂತನ ಸಚಿವರ ಖಾತೆ:
ಈ ಪೈಕಿ ಇಂಧನ, ಯೋಜನೆ, ಸಣ್ಣ ಕೈಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನಸೇವೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಖಾತೆಗಳು ನೂತನ ಸಚಿವರಿಗೆ ಹಂಚಿಕೆ ಮಾಡುವ ಸಂಭವವಿದೆ.
ಇನ್ನುಳಿದಂತೆ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಬಳಿ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ದಿಮೆ ಮತ್ತು ಜೀವನೋಪಾಯ ಇಲಾಖೆಗಳಿದ್ದು, ಇವುಗಳಲ್ಲಿ ಯಾವುದಾದರೂ ಇಲಾಖೆಗಳು ನೂತನ ಸಚಿವರ ಹೆಗಲೇರಲಿವೆ.
ಹೊಸ ಸಚಿವರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಎಸ್.ಅಂಗಾರ, ಸಿ.ಪಿ. ಯೋಗೇಶ್ವರ, ಆರ್.ಶಂಕರ್ ಮತ್ತು ಎನ್. ನಾಗರಾಜ್ (ಎಂಟಿಬಿ) ಅವರುಗಳಿಗೆ ಯಾವ್ಯಾವ ಖಾತೆಗಳು ಸಿಗಲಿವೆ, ಈಗಿರುವ ಸಚಿವರ ಯಾವ ಖಾತೆಗಳು ಬದಲಾಗಲಿವೆ ಎಂಬ ರಹಸ್ಯವಿನ್ನು ಎರಡು ದಿನಗಳಲ್ಲಿ ಬಿಚ್ಚಿಕೊಳ್ಳುವ ಎಲ್ಲ ಸಂಭವಗಳಿವೆ.