ಬೆಂಗಳೂರು: ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂಬ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಜೊತೆ ಕೈಮಿಲಾಯಿಸಿರುವ ಶಿವಸೇನೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿಗೆ ಬಂದ ದಿನವೇ ಈ ಕಿಡಿ ಹೊತ್ತಿಸಿದ್ದು, ರಾಜ್ಯದ ಪ್ರಮುಖ ನಾಯಕರು, ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಮಹಾಜನ್ ವರದಿಯಂತೆ ಈ ಹಿಂದೆಯೇ ಗಡಿ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ಕರ್ನಾಟದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಒಂದಾಗಿ ಬಾಳ್ವೆ ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೇ ಮರಾಠ ಅಭಿವೃದ್ಧಿ ಮಂಡಳಿ ರಚಿಸಿರುವ ಸಿಎಂ ಯಡಿಯೂರಪ್ಪ ಸರ್ಕಾರ, ಮರಾಠಿಗರ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಘೋಷಿಸಿದೆ.
ಇಷ್ಟಾದರೂ ಕುಚೋದ್ಯ ನಡೆಸಿರುವ ಶಿವಸೇನೆ, ಮತ್ತೆ ಗಡಿ ಕ್ಯಾತೆ ತೆಗೆದಿದೆ. ಈ ಮೂಲಕ ಕನ್ನಡಿಗರು ಮತ್ತು ಮರಾಠಿಗರ ನಡುವೆ ಕಿಚ್ಚು ಹೊತ್ತಿಸುವ ಚಿತಾವಣೆ ನಡೆಸಿದ್ದು, ಕನ್ನಡಿಗರನ್ನು ಕೆರಳುವಂತೆ ಮಾಡಿದೆ.
ಒಂದಿಂಚೂ ಭೂಮಿ ಕೊಡಲ್ಲ:
ಉದ್ಧವ್ ಟ್ವೀಟ್ಗೆ ಖಾರವಾಗಿ ಪ್ರಕ್ರಿಯಿಸಿರುವ ಸಿಎಂ ಯಡಿಯೂರಪ್ಪ, ಮರಾಠಿ ಭಾಷೆ ಮತ್ತು ಸಂಸ್ಕøತಿ ಪ್ರಮುಖ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವುದಾಗಿ ಅಲ್ಲಿನ ಸಿಎಂ ಹೇಳಿರುವುದು ಉದ್ಧಟತನ. ಇದು ಭಾರತೀಯ ಒಕ್ಕೂಟ ತತ್ತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ. ಹೀಗಿರುವಾಗ ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ. ಅದೇ ರೀತಿ ಮಹಾರಾಷ್ಟ್ರದ ಗಡಿಜಿಲ್ಲೆಗಳಲ್ಲಿ ಕನ್ನಡಿಗರೂ ಮರಾಠಿಗರೊಂದಿಗೆ ಬೆರೆತಿದ್ದಾರೆ. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನವನ್ನು ಸ್ವತಃ ಅಲ್ಲಿನ ಸಿಎಂ ಮಾಡಿರುವುದು ನೋವಿನ ಸಂಗತಿ. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ತ್ವವನ್ನು ಗೌರವಿಸುವ ಬದ್ಧತೆ ತೋರಲಿ ಎಂದು ಬುದ್ಧಿವಾದ ಹೇಳಿದರು.