ಬೆಂಗಳೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಂತಿದ್ದು, ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ ಆಗುವ ಸರ್ವಸಾಧ್ಯತೆಗಳಿವೆ.
ಭಾನುವಾರ ರಾತ್ರಿ ಹೊಸದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖುದ್ದು ಈ ವಿಚಾರ ತಿಳಿಸಿದ್ದು, ಏಳು ಜನರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.
ಸಂಪುಟ ವಿಸ್ತರಣೆಗೆ ವರಿಷ್ಠರೂ ಒಪ್ಪಿಗೆ ಸೂಚಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಅನುಕೂಲ ನೋಡಿಕೊಂಡು ದಿನಾಂಕ ಅಂತಿಮಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಅಮಾವಾಸ್ಯೆ ಅಡ್ಡಿ ಇಲ್ಲ?:
ಜ.13 ರಂದು ಅಮಾವಾಸ್ಯೆ ಇದೆಯಾದರೂ ಮಧ್ಯಾಹ್ನದ ನಂತರ ಸಮಸ್ಯೆಯಿಲ್ಲ. ಹೀಗಾಗಿ ಬುಧವಾರ ಸಂಜೆ ವೇಳಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಅಡ್ಡಿಯಿಲ್ಲ. ಅಕಸ್ಮಾತ್ ಈ ದಿನಾಂಕದಲ್ಲಿ ವರಿಷ್ಠರಿಗೆ ಅನುಕೂಲ ಆಗದಿದ್ದರೆ, ಜ.14ರ ಮಕರ ಸಂಕ್ರಾಂತಿಯಂದೇ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದು ಕೂಡ ಇದೇ ವೇಳೆ ಅಂತಿಮವಾಗಲಿದೆ.
ಪ್ರಸ್ತುತ ರಾಜ್ಯಪಾಲ ವಿ.ಆರ್. ವಾಲಾ ಅವರೂ ಪ್ರವಾಸದಲ್ಲಿದ್ದು, ರಾಜಭವನದಿಂದಲೂ ದಿನಾಂಕ ನಿಗದಿ ಸಂಬಂಧ ವ್ಯವಹರಿಸಬೇಕಿದೆ. ರಾಜ್ಯಪಾಲರ ಸಮಯಾವಕಾಶ ಕೇಳಲೂ ನಿರ್ಧರಿಸಲಾಗಿದೆ. ಬುಧವಾರ ಸಂಜೆ ಅಥವಾ ಗುರುವಾರ ಬೆಳಗ್ಗೆ ಸಂಪುಟ ವಿಸ್ತರಣೆ ಆಗಲಿದೆ.