ವಿಜಯಪುರ: ಯಾವುದೇ ವ್ಯಾಕ್ಸಿನ್ ಮಾನ್ಯತೆ ನೀಡಬೇಕಾದರೆ 3ನೇ ಹಂತದ ಪ್ರಯೋಗ ಅವಶ್ಯವಿದೆ. ಈಗ ಲಸಿಕೆ ತುರ್ತು ಅವಶ್ಯಕವಿರುವುದು ನಿಜ. ಹಾಗಂತ ಸಂಪೂರ್ಣ ಪರೀಕ್ಷೆಯಾಗದೇ ಜನರ ಮೇಲೆ ಇದನ್ನು ಪ್ರಯೋಗ ಮಾಡುವಂತಿಲ್ಲ ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ವ್ಯಾಕ್ಸಿನ್ ಬಗ್ಗೆ ಪ್ರತಿಪಕ್ಷಗಳ ಅಪಸ್ವರ ವಿಚಾರವಾಗಿ ಪ್ರತಿಕ್ರಿಯಿಸಿ, ಆತ್ಮ ನಿರ್ಭರ ಹೆಸರಿನಲ್ಲಿ ಜನರ ಮೇಲೆ ಕೊರೋನಾ ಲಸಿಕೆ ಪ್ರಯೋಗ ಸರಿಯಲ್ಲ, ಮೊದಲು ಲಸಿಕೆಯ ಎಲ್ಲ ಪರೀಕ್ಷೆಗಳು ಪೂರ್ಣವಾಗಲಿ. ರಷ್ಯಾ ಅಧ್ಯಕ್ಷ ಪುಟಿನ್ ಮಾದರಿಯಲ್ಲಿ ಇದನ್ನು ಸಮರ್ಥಿಸುವವರು ಮೊದಲು ಲಸಿಕೆ ಬಳಸಲಿ ಎಂದು ಪ್ರಧಾನಿ ಹೆಸರೇಳದೆ ಪರೋಕ್ಷವಾಗಿ ಟೀಕಿಸಿದರು.
ಲಸಿಕೆ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಶಾಲೆ-ಕಾಲೇಜುಗಳು ಆರಂಭವಾಗಿವೆ, ಬಡ ವಿದ್ಯಾರ್ಥಿಗಳು, ಪೆಷಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡು ಮುಂದಡಿ ಇಡಬೇಕಾಗಿದೆ ಎಂದರು.
ಅಲ್ಲದೆ ಬ್ರಿಟನ್ ರೂಪಾಂತರ ಕೊರೋನಾ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ಸಾಕಷ ಅಧ್ಯಯನ ನಡೆಯಬೇಕಿದೆ. ಬ್ರಿಟನ್ ಕೊರೋನಾ ಈಗ ಬೆಂಗಳೂರು, ಕೇರಳಕ್ಕೆ ಕಾಲಿಟ್ಟಿದೆ. ಸರ್ಕಾರ ತಕ್ಷಣವೇ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಹಳೆಯ ಕೊರೋನಾ ಮಕ್ಕಳ ಮೇಲೆ ಅಷ್ಟೊಂದು ಪರಿಣಾಮ ಬೀರಿರಲಿಲ್ಲ. ಆದರೆ ಬ್ರಿಟನ್ ಕೊರೋನಾ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ ಎಂದರು.
ಬೆಳಗಾವಿ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಮಿತಿ ವತಿಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿಗೆ ಕಳುಹಿಸಲಾಗಿದೆ, ಕೆಪಿಸಿಸಿ ವತಿಯಿಂದ ಎಐಸಿಸಿಗೆ ಪಟ್ಟಿ ಕಳುಹಿಸಿದ ಮೇಲೆ ಅಲ್ಲಿ ಅಂತಿಮ ಆಯ್ಕೆ ನಡೆಯಲಿದೆ, ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.