ಪಕ್ಷಿಗಳ ವಿಹಾರಕ್ಕೆ ಹೇಳಿ ಮಾಡಿಸಿದ ತಾಣ ಶೆಟ್ಟಿಕೇರಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

ಲಕ್ಷ್ಮೇಶ್ವರ: ತಾಲೂಕಿನ ಶೆಟ್ಟಿಕೇರಿಯೂ ಇದೀಗ ಮತ್ತೊಂದು ಪಕ್ಷಿಧಾಮ ಆಗುವತ್ತ ದಾಪುಗಾಲು ಇಡುತ್ತಿದೆ. ವಿದೇಶಿ ಪಕ್ಷಿಗಳು ಕೆರೆಯಲ್ಲಿ ಬೀಡು ಬಿಡುತ್ತಿರುವುದೇ ಇದಕ್ಕೆ ಕಾರಣ. ಉತ್ತರ ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ ಮಾಗಡಿ ಕೆರೆಗೆ ಬರುವ ಪಕ್ಷಿಗಳು ಶೆಟ್ಟಿಕೇರಿ ಕೆರೆಯತ್ತ ಮುಖ ಮಾಡುತ್ತಿವೆ.
ಈ ವರ್ಷ ಸುರಿದ ಭಾರಿ ಮಳೆಗೆ ಅಂದಾಜು 224 ಎಕರೆ ವಿಶಾಲ ಅಂಗಳದ ಕೆರೆ ಜಲರಾಶಿಯಿಂದ ತುಂಬಿ ಕಂಗೊಳಿಸುತ್ತಿದೆ. ಅಲ್ಲದೆ ವಿದೇಶಿ ಪಕ್ಷಿಗಳ ಆಗಮನದಿಂದ ಅದರ ಅಂದ ಮತ್ತಷ್ಟು ಇಮ್ಮಡಿಸಿದೆ. ಮಾಗಡಿ ಕೆರೆ ಪ್ರಮುಖ ರಸ್ತೆಗೆ ಹೊಂದಿಕೊಂಡಿದ್ದು, ಇಲ್ಲಿ ಸದಾ ವಾಹನಗಳ ಸಂಚಾರದ ದಟ್ಟಣೆ ಇರುತ್ತದೆ. ಅಲ್ಲದೆ, ಸುತ್ತಮುತ್ತಲಿನ ಕ್ರಶರ್ ಘಟಕಗಳಿಂದ ಹೊರಡುವ ಶಬ್ದ ಪಕ್ಷಿಗಳಿಗೆ ಕಿರಿಕಿರಿ ಆಗುತ್ತಿರುವುದರಿಂದ ಅತ್ಯಂತ ಪ್ರಶಾಂತ ವಾತಾವರಣ ಹಾಗೂ ಮಾಗಡಿ ಕೆರೆಗಿಂತ ವಿಶಾಲವಾಗಿರುವ ಶೆಟ್ಟಿಕೇರಿ ಕೆರೆ ಅಂಗಳಕ್ಕೆ ಲಗ್ಗೆ ಇಡುತ್ತಿವೆ.
ವಿವಿಧ ಜಾತಿಗೆ ಸೇರಿದ ಅಂಡಮಾನ್, ಟಿಬೆಟ್, ಲಡಾಕ್, ನೇಪಾಳ ಮಂಗೋಲಿಯಾ, ಬಾಂಗ್ಲಾ ದೇಶಗಳಿಂದ ಬಾರ್‍ಹೆಡೆಡ್ ಗೂಸ್(ನಾಮತಲೆ ಬಾತುಕೋಳಿ) ಪೇಂಟೆಡ್ ಸ್ಪಾರ್ಕ್, ಗ್ಯಾಡವಾಲ್, ವೈಟ್ ಮತ್ತು ಬ್ಲ್ಯಾಕ್ ಈಬೀಸ್, ಬ್ಲ್ಯಾಕ್ ನೇಕಡ್, ಸ್ಪಾಟ್ಬಿ(ಸ್ಕಾಪ್ರ್ಡೇಕ್ ಹಾಗೂ ಹಂಸಗಳ ಜಾತಿಗೆ ಸೇರಿದ) ಬಿಳಿ, ಕಂದು ಬಣ್ಣದ ರೆಕ್ಕೆ ಹಾಗೂ ಕೇಸರಿ ಬಣ್ಣದ ಕಾಲುಗಳುಳ್ಳ ಪಕ್ಷಿಗಳು ಕೆರೆಯಂಗಳದಲ್ಲಿ ಸ್ವಚ್ಛಂದವಾಗಿ `ಕೊಕ್ ಕೊಕ್’ ಎಂದು ಶಬ್ದ ಮಾಡುತ್ತ ವಿಹರಿಸುತ್ತಿವೆ.
ನಸುಕಿನ ಜಾವ ಆಹಾರಕ್ಕಾಗಿ ಅಲೆಯುವ ಪಕ್ಷಿಗಳ ಹಿಂಡು ಬೆಳಗ್ಗೆ 10ರ ವೇಳೆಗೆ ಕೆರೆಗೆ ಮರಳಿ ತೆರೆಗಳೊಂದಿಗೆ ಸಂಜೆವರೆಗೆ ತೇಲಾಡುತ್ತಿರುತ್ತವೆ. ಈ ಭಾಗದ ಹೊಲಗಳಲ್ಲಿ ಬೆಳೆಯುವ ಬಳ್ಳಿ ಶೇಂಗಾ ಪಕ್ಷಿಗಳಿಗೆ ಪೌಷ್ಟಿಕ ಆಹಾರವಾಗಿದೆ.
ಶೆಟ್ಟಿಕೇರಿಯ ಕೆರೆ ಸುತ್ತ ಪ್ರಕೃತಿ ನಿರ್ಮಿತ ವೈಭವ ಇದೆ. ಪಶ್ಚಿಮದಲ್ಲಿ ಬೃಹತ್ ಗುಡ್ಡ, ಪೂರ್ವದಲ್ಲಿ ಅರಣ್ಯ ಇಲಾಖೆಗೆ ಸೇರಿದ ಹತ್ತಾರು ಎಕರೆಯ ನರ್ಸರಿಯಲ್ಲಿ ಬೃಹದಾಕಾರದ ನೀಲಗಿರಿ ತೋಪು ಕೆರೆಗೆ ಸೌಂದರ್ಯ ನೀಡಿವೆ. ಪಕ್ಷಿಗಳ ವಿಹಾರಕ್ಕೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಕೆರೆಗೆ ಬರುವ ಪಕ್ಷಿಗಳು ನೀಲಗಿರಿ ಮರಗಳ ಮೇಲೆ ವಿಶ್ರಾಂತಿ ಪಡೆಯುವುದನ್ನು ನೋಡುವುದೇ ಒಂದು ಆನಂದದ ಕ್ಷಣ.
`ನಮ್ಮೂರಿನ ಕೆರೆಗೆ ಬೇರೆ ಬೇರೆ ದೇಶಗಳ ಪಕ್ಷಿಗಳು ಬರುತ್ತಿರುವುದರಿಂದ ನಮ್ಮೂರಿನ ಕೀರ್ತಿ ಹೆಚ್ಚುತ್ತಿದೆ. ಪಕ್ಷಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಶೆಟ್ಟಿಕೇರಿಯ ನಿವಾಸಿ ದೀಪಕ ಲಮಾಣಿ ಹೇಳುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ