ಹೊಸದಿಲ್ಲಿ: ಕೊರೋನಾ ಬಿಕ್ಕಟ್ಟಿನ ವೇಳೆ ದೇಶದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸಿದ್ದು, ನಿಮ್ಮೆಲ್ಲರ ಹೋರಾಟಕ್ಕೆ ತಲೆಬಾಗುತ್ತಾನೆ. ಅಂತೆಯೇ ನಾವೆಲ್ಲರೂ ಸೇರಿ ಹೊಸ ವರ್ಷಕ್ಕೆ ಸದೃಢ, ಸ್ವಾಲಂಬಿ ಹಾಗೂ ಸ್ವಚ್ಛ ಭಾರತ ನಿರ್ಮಿಸುವ ಸಂಕಲ್ಪ ಮಾಡಿಕೊಳ್ಳೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
72ನೇ ಆವೃತ್ತಿಯ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿ, ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಆದ್ಯತೆ ನೀಡೋಣ ಎಂದಿದ್ದಾರೆ. ಅಲ್ಲದೇ ವೋಕಲ್ ಫಾರ್ ಲೋಕಲ್ ಎಂಬ ಮಂತ್ರದಿಂದ ಸ್ಥಳೀಯ ಉತ್ಪಾದನಕಾರರಿಗೆ ಹಾಗೂ ಉದ್ಯಮಗಳಿಗೆ ನೆರವು ನೀಡೋಣ ಎಂದು ತಿಳಿಸಿದ್ದಾರೆ.
ಸೋಂಕು ಬಿಕ್ಕಟ್ಟಿನಿಂದ ತಾವು ಈ ವರ್ಷ ಅನುಭವಿಸಿದ ಸಂಕಷ್ಟದ ಬಗ್ಗೆ ಹಾಗೂ ಹೊಸ ವರ್ಷಕ್ಕೆ ನಮ್ಮ ಸಂಕಲ್ಪ ಏನಿರಬೇಕು ಎಂಬುದರ ಬಗ್ಗೆ ಹಲವರಿಂದ ನನಗೆ ಸಂದೇಶಗಳು ಬಂದಿವೆ. ಹಾಗಾಗಿ ಹೊಸ ವರ್ಷದ ಸಂಕಲ್ಪ ಹೇಗಿರಬೇಕು ಎಂಬುದರ ಬಗ್ಗೆ ಹಂಚಿಕೊಳ್ಳುತ್ತಿದ್ದೇನೆ. ಹೊಸ ವರ್ಷಕ್ಕೆ ನಾವು ಸಿಕ್ಕ ಸಿಕ್ಕ ಕಡೆ ಕಸ ಬಿಸಾಡುವುದಿಲ್ಲ ಎಂದು ಸಂಕಲ್ಪ ಮಾಡಿಕೊಳ್ಳೋಣ. ಭಾರತವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿ ಮಾಡೋಣ ಎಂದು ಪಣ ತೊಡೋಣ ಎಂದು ಹೇಳಿದ್ದಾರೆ.
ಜತೆಗೆ 2020ರಲ್ಲಿ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಸಿಕ್ಕ ಬೆಂಬಲ ಕಂಡಿದ್ದೇವೆ. ಪ್ರತಿ ಮನೆಯಲ್ಲಿ ವೋಕಲ್ ಫಾರ್ ಲೋಕಲ್ ಮಂತ್ರ ಪ್ರತಿಧ್ವನಿಸಿದ್ದಕ್ಕೆ ಸಾಕ್ಷಿಯಾಗಿದ್ದೇವೆ. ಹೀಗೆ ಸ್ಥಳೀಯ ಉತ್ಪಾದನಾ ವಲಯಕ್ಕೆ ಬೆಂಬಲಿಸುವ ಮೂಲಕ ದೇಶದ ವಿತ್ತೀಯ ಏಳಿಗೆಗೆ ದೇಶದ ಜನರು ಕಾರಣರಾಗಬೇಕು ಎಂದು ತಿಳಿಸಿದ್ದಾರೆ.