ಕೋಲ್ಕತ್ತ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳದಲ್ಲಿ ಶೀಘ್ರವೇ ದೀದಿ ಕೋಟೆ ಛಿದ್ರವಾಗಲಿದ್ದು, ಕಮಲ ಅರಳುವುದು ನಿಶ್ಚಿತ ಎಂದು ತಿಳಿಸಿದ್ದಾರೆ. ಜತೆಗೆ ಬಂಗಾಳದ ಜನತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತದಿಂದ ಬೇಸತ್ತಿದ್ದು, ಅಭಿವೃದ್ಧಿಗಾಗಿ ಹಾತೊರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಎರಡು ದಿನದ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ, ಕೋಲ್ಕತ್ತ ಬೋಲ್ಪರದಲ್ಲಿ ಭಾನುವಾರ ಬೃಹತ್ ರೋಡ್ ಶೋ ನಡೆಸಿದ್ದಾರೆ. ರ್ಯಾಲಿಯಲ್ಲಿ ನೆರೆದಿದ್ದ ಸಾವಿರಾರು ಮಂದಿಯನ್ನು ಕಂಡು, ನಾನು ಇದುವರೆಗೂ ಅನೇಕ ರ್ಯಾಲಿಯಲ್ಲಿ ಭಾಗಿಯಾಗಿದ್ದೇನೆ. ಆದರೆ ಇಂತಹ ಬೃಹತ್ ಮಟ್ಟದಲ್ಲಿ ಜನರು ಬಂದು ಸೇರಿರುವುದನ್ನು ಮೊದಲ ಬಾರಿ ಕಾಣುತ್ತಿದ್ದೇನೆ. ಇದುವೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರು ಹೊಂದಿರುವ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿಯಾಗಿದ್ದು, ಮಮತಾ ಸರ್ಕಾರ ವಿರುದ್ಧ ಹೊಂದಿರುವ ಆಕ್ರೋಶಕ್ಕೆ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.
ಇಂದು ಅಪಾರ ಸಂಖ್ಯೆಯಲ್ಲಿ ಸೇರಿರುವ ಜನರ ಕಂಡು ಒಂದಂತೂ ವಿಶ್ವಾಸದಿಂದ ಹೇಳಬಲ್ಲೆ. ದೀದಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿ ಅಕಾರಕ್ಕೇರುವುದು ನಿಶ್ಚಿತವಾಗಿದೆ. ಬಂಗಾಳದ ಜನರಿಗೆ ಬದಲಾವಣೆ ಬೇಕಿದ್ದು, ರಾಜ್ಯದಲ್ಲಿ ಕಮಲ ಅರಳುವ ಸಮಯ ಹತ್ತಿರವಾಗಿದೆ. ಬದಲಾವಣೆ ಎಂದರೆ ಬಂಗಾಳದ ಅಭಿವೃದ್ಧಿಯಾಗಿದ್ದು, ಅಭಿವೃದ್ಧಿ ಮಾರ್ಗದಲ್ಲಿ ಮುನ್ನಡೆಯಲು ಜನರು ಬಿಜೆಪಿಗೆ ಮತಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.