ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ಏಳು ವರ್ಷದ ಬಳಿಕ ಪಂಚಲಿಂಗ ದರ್ಶನ

ಮೈಸೂರು: ಏಳು ವರ್ಷಗಳ ಬಳಿಕ ಬಂದಿರುವ ತಿ.ನರಸೀಪುರ ತಾಲೂಕಿನ ತಲಕಾಡುವಿನಲ್ಲಿರುವ ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು. ಅಂಕುರಾರ್ಪಣೆ, ನವಗ್ರಹ ಕಲಶಸ್ವಪ್ನದೊಂದಿಗೆ ಪಂಚಲಿಂಗ ದರ್ಶನಕ್ಕೆ ಆರಂಭವಾಯಿತು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ವೈದ್ಯನಾಥೇಶ್ವರ ದೇವಾಲಯದಲ್ಲಿ ದೀಪ ಬೆಳಗುವ ಮೂಲಕ ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಿದರು. ಅಲ್ಲದೇ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಪ್ರಾರ್ಥಿಸಿದರು.
10 ದಿನ ಪಂಚಲಿಂಗ ದರ್ಶನಕ್ಕೆ ಇಡೀ ತಲಕಾಡು ಸಜ್ಜುಗೊಂಡಿದೆ. ದೇವಸ್ಥಾನಗಳು ತಳೀರು, ತೋರಣ, ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಂಡಿವೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಪ್ರಧಾನ ಅರ್ಚಕ ಆನಂದ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು.
ಸ್ಥಳೀಯರಿಗೆ ಮಾತ್ರ ದರ್ಶನ ಭಾಗ್ಯ:
ಕೊರೋನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈ ಬಾರಿ ಸರಳವಾಗಿ ಪಂಚಲಿಂಗ ದರ್ಶನ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಈ ಬಾರಿ ಸ್ಥಳೀಯರಿಗೆ ಮಾತ್ರ ಪಂಚಲಿಂಗದ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಪ್ರತಿದಿನ 1000 ಜನರಿಗೆ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ. ಪಂಚಲಿಂಗ ದರ್ಶನಕ್ಕೆ ಆಗಮಿಸುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.
ಭದ್ರತಾ ದೃಷ್ಟಿಯಿಂದ 9ಕಡೆ ಚೆಕ್‍ಸ್ಟ್ ವ್ಯವಸ್ಥೆ ಹಾಗೂ ಆರೋಗ್ಯ ಇಲಾಖೆಯಿಂದ ವೈದ್ಯರನ್ನು ಒಳಗೊಂಡ 10 ತಂಡಗಳ ನಿಯೋಜನೆ ಮಾಡಲಾಗಿದ್ದು, ಎಲ್ಲಾ 5 ದೇವಸ್ಥಾನಗಳ ಬಳಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಶುಕ್ರವಾರ ಬೆಳಗ್ಗೆ ಧ್ವಜಾರೋಹಣ, ರಕ್ಷಾಬಂಧನ, ಪುಷ್ಪಮಂಟಪಾರೋಹಣ, ರುಷಾಭಾರೋಹಣ ನಡೆಯಲಿದೆ.
ಡಿ.14ರಿಂದ 19ರವರೆಗೆ ಕಾರ್ಯಕ್ರಮ:
ಡಿ.14 ರಂದು ಮಹಾಭಿಷೇಕ, ಬೆಳಗ್ಗೆ 7.30 ಕ್ಕೆ ಪಂಚಲಿಂಗ ದರ್ಶನ, ಗಜಾರೋಹಣ ಉತ್ಸವ. ಡಿಸೆಂಬರ್ 15 ರಂದು ಶ್ರೀಮದಿವ್ಯ ಬ್ರಹ್ಮ ರಥೋತ್ಸವ, ಹಂಸವಾಹನೋತ್ಸವ. ಡಿ.16 ರಂದು ಶಯನೋತ್ಸವ, ಅಶ್ವಾರೋಹಣ, ಮೃಗಯಾತ್ರೋತ್ಸವ. ಡಿ.17 ರಂದು ಅವಭೃತ ತೀರ್ಥಸ್ನಾನ, ತೆಪೊತ್ಸವ. ಡಿ.18 ರಂದು ಪಂಚಾಭಿಷೇಕ, ಪಂಚೋಪಚಾರ, ಪೂರ್ವಕ ಕೈಲಾಸೋತ್ಸವ, ಡಿ.19 ರಂದು ನಂದಿವಾಹನೋತ್ಸವ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ