ಉಡುಪಿ: ಕೋಟ್ಯಂತಭಾರತೀಯರ ಕನಸು ಸಾಕ್ಷ್ಯಾತ್ಕಾರವಾಗುವ ಸಮಯ ಸನ್ನಿಹಿತವಾಗುತ್ತಿದೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯಾದಲ್ಲಿ ಭೂಮಿ ಧಾರಣಾ ಪರೀಕ್ಷೆ ಪೂರ್ಣಗೊಂಡಿದ್ದು, ಶೀಘ್ರವೇ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭಿಸಲು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ.
ಸುಪ್ರೀಂ ಕೋರ್ಟ್ ಶತಮಾನಗಳ ವಿವಾದವನ್ನು ಬಗೆಹರಿಸಿ, ಅಯೋಧ್ಯಾ ಜನ್ಮಭೂಮಿ (70 ಎಕರೆ) ಪ್ರಭು ಶ್ರೀರಾಮನಿಗೆ ಸೇರಿದ್ದು ಎಂದು ಕಳೆದ ವರ್ಷ ತೀರ್ಪು ನೀಡಿತ್ತು. ನಂತರ ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸಿದ್ದಲ್ಲದೇ ಆಗಸ್ಟ್ 5ರಂದು ಭೂಮಿ ಪೂಜೆಯನ್ನೂ ನೆರವೇರಿಸಿದ್ದರು. ಟ್ರಸ್ಟ್ ಈಗಾಗಲೇ ಮೂರು ಸಭೆಗಳನ್ನು ನಡೆದಿದ್ದು, ಇದೀಗ ಶೀಘ್ರ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದೆ.
200 ಅಡಿ ಆಳದ ವರೆಗೂ ಮರಳು
ರಾಷ್ಟ್ರೀಯತೆಯ ಪ್ರತೀಕವಾಗಿರುವ ಭವ್ಯ ರಾಮಮಂದಿರವು ಅಯೋಧ್ಯಾದಲ್ಲಿ ಸರಯೂ ನದಿ ತೀರದಲ್ಲಿ ನಿರ್ಮಾಣವಾಗುತ್ತಿದೆ. ಶಾಶ್ವತವಾಗಿ ಸಾವಿರಕ್ಕೂ ಅಕ ವರ್ಷಗಳ ಕಾಲ ಇದು ಬಾಳುವುದರಿಂದ ಭೂಕಂಪ, ಬಿರುಗಾಳಿ ಸಹಿತ ಇತರ ನೈಸರ್ಗಿಕ ವಿಪತ್ತುಗಳಿಂದ ಸುರಕ್ಷಿತವಾಗಿರುವಂತೆ ನಿರ್ಮಿಸಲು ಭೂಮಿಯ ಧಾರಣಾ ಸಾಮಥ್ರ್ಯ ಹಾಗೂ ಮಣ್ಣಿನ ಗುಣಗಳ ಪರೀಕ್ಷೆ ನಡೆಸಲು ಟ್ರಸ್ಟ್ ನಿರ್ಧರಿಸಿತ್ತು. ಆಗಸ್ಟ್ನಲ್ಲಿ ಧಾರಣಾ ಸಾಮಥ್ರ್ಯ ಪರೀಕ್ಷೆ ಆರಂಭಿಸಿದ್ದು, ಮೊದಲು 50 ಅಡಿಗಳಷ್ಟು ಕೆಳಗಿರುವ ಮಣ್ಣನ್ನು ಪರೀಕ್ಷಿಸಲಾಯಿತು. ಅಲ್ಲಿ ಸಡಿಲವಾದ ಮರಳು ಇರುವುದು ಪತ್ತೆಯಾದ ನಂತರ, ನಾಲ್ಕೈದು ದಿನಗಳ ಹಿಂದೆ 200 ಅಡಿಗಳಷ್ಟು ಆಳದವರೆಗೂ ಮರಳು ಇರುವುದು ದೃಢಪಟ್ಟಿದೆ.
ಐಐಟಿ, ಸಿಬಿಆರ್ಐ ತಜ್ಞರಿಂದ ಪರೀಕ್ಷೆ
ಮದ್ರಾಸ್ನ ಐಐಟಿ, ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಬಿಆರ್ಐ) ಮತ್ತು ಮಂದಿರ ನಿರ್ಮಾಣದ ಗುತ್ತಿಗೆ ಪಡೆದಿರುವ ಎಲ್ ಆ್ಯಂಡ್ ಟಿ (ಲಾರ್ಸೆನ್ ಆ್ಯಂಡ್ ಟೌಬ್ರೊ) ಸಂಸ್ಥೆಯ ತಜ್ಞರು ಜಂಟಿಯಾಗಿ ಭೂಮಿ ಧಾರಣಾ ಸಾಮಥ್ರ್ಯ ಪರೀಕ್ಷೆ ನಡೆಸಿದ್ದಾರೆ. ಐಐಟಿ-ಮದ್ರಾಸ್ನ ಇಂಜಿನಿಯರಿಂಗ್ ವಿಭಾಗವು ಇಲ್ಲಿಯವರೆಗೆ ಹಲವೆಡೆ ಹಳ್ಳಗಳನ್ನು ಅಗೆಯುವ ಮೂಲಕ ಪರೀಕ್ಷೆಗಳಿಗಾಗಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದೆ. ಮಂದಿರದ ಅಡಿಪಾಯವು ದೃಢವಾಗಿರುವುದು ಖಚಿತಗೊಂಡ ನಂತರ ನಿರ್ಮಾಣ ಕಾರ್ಯ ಶುರುವಾಗಲಿದೆ.
ಪ್ರಸಕ್ತ ರಾಮಮಂದಿರ ಸಂಕೀರ್ಣದ ನೀಲನಕ್ಷೆಗಳ ಬಗ್ಗೆ ಇಂಜಿನಿಯರ್ಗಳು ಪರಸ್ಪರ ಸಮಾಲೋಚನೆ ನಡೆಸುತ್ತಿದ್ದಾರೆ. ಈ ವೇಳೆ ಟ್ರಸ್ಟ್ನ ಕೋಶಾಧ್ಯಕ್ಷ ಸ್ವಾಮಿ ಗೋವಿಂದ್ ದೇವ್ಗಿರಿ, ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕೂಡ ಭಾಗಿಯಾಗುತ್ತಿದ್ದಾರೆ. ಟ್ರಸ್ಟ್ನ ವಿಶ್ವಸ್ಥ ಹಾಗೂ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಸ್ಥಳಕ್ಕೆ ಭೇಟಿ ನೀಡಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಸರಯೂ ತಟದಲ್ಲಿ ಭವ್ಯವಾಗಿ ತಲೆಎತ್ತಲಿರುವ ರಾಮ ಮಂದಿರಕ್ಕೆ ಕಬ್ಬಿಣವನ್ನು ಬಳಸಲಾಗುವುದಿಲ್ಲ. ಕಾಮಗಾರಿ ಆರಂಭಿಸಿದ ನಂತರ ಮಂದಿರ ನಿರ್ಮಾಣ ಕಾರ್ಯವು 36-40 ತಿಂಗಳಲ್ಲಿ ಮುಗಿಯುವ ನಿರೀಕ್ಷೆಯನ್ನು ಟ್ರಸ್ಟ್ ಹೊಂದಿದೆ.