
ಶಿವಮೊಗ್ಗ: ಮಹದಾಯಿ ನೀರಿನ ಹಂಚಿಕೆ ವಿವಾದ ಕುರಿತು ಗೋವಾ ಮುಖ್ಯಮಂತ್ರಿಯನ್ನು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ ನೀರು ಹಂಚಿಕೆ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಆದರೆ, ಇತ್ತೀಚೆಗಷ್ಟೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಹದಾಯಿ ನೀರು ಹಂಚಿಕೆ ವಿವಾದ ಸಂಬಂಧ ಮೇಲ್ಮನವಿ ಅರ್ಜಿಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದು, ವಿವಾದ ಸಂಬಂಧ ಕೋರ್ಟ್ನಿಂದ ಹೊರಗಡೆ ಮಾತುಕತೆಗೆ ಗೋವಾ ಸಿದ್ಧವಿಲ್ಲ ಎಂದಿದ್ದರು.
ವರಿಷ್ಠರ ತೀರ್ಮಾನದಂತೆ ಕ್ರಮ
ದಿಲ್ಲಿ ಮುಖಂಡರು ಯಾವ ರೀತಿ ತೀರ್ಮಾನ ಕೈಗೊಳ್ಳುವರೋ ಅದರ ಆಧಾರದ ಮೇಲೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮುಂದಿನ ಎರಡು – ಮೂರು ದಿನದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ಬಗ್ಗೆ ಭಾನುವಾರ ಸಂಜೆ ಪಕ್ಷದ ಹೈಕಮಾಂಡ್ ಜೊತೆ ಮಾತನಾಡಲಿದ್ದೇನೆ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು
ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬರಲು ಸಹಕಾರಿಯಾದ 17 ವಲಸೆ ಶಾಸಕರು ದಿನಂಪ್ರತಿ ಪ್ರತ್ಯೇಕ ಸಭೆ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರ ಬಗ್ಗೆ ಯಾವುದೇ ಚರ್ಚೆ ಮಾಡಲ್ಲ ಎಂದರು.