ಮುಂದಿನ 3 ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ

ದಾವಣಗೆರೆ: ನಾಯಕತ್ವ ಬದಲಾವಣೆಯ ಯಾವುದೇ ವಿಚಾರವೂ ಪಕ್ಷದ ಮುಂದಿಲ್ಲ. ಮುಂದಿನ 3 ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಸ್ಪಷ್ಟಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ 15 ದಿನಗಳಿಗೊಮ್ಮೆ ಸಿಎಂ ಯಡಿಯೂರಪ್ಪ ಹಾಗೂ ನಾವು ಸಹಜವಾಗಿಯೇ ಭೇಟಿಯಾಗುತ್ತಿರುತ್ತೇವೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಲಾಗದು. ರಾಜ್ಯದಲ್ಲಿ ಸಂಪುಟ ವಿಸ್ತರಣೆ, ಪುನರ್ ರಚನೆ ಬಗ್ಗೆಯೂ ಯಾವುದೇ ಗೊಂದಲಗಳಿಲ್ಲ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾವು ಕೇಂದ್ರ ನಾಯಕರ ಜೊತೆಗೆ ಮಾತನಾಡಿದ್ದು, ಸಂಪುಟ ವಿಸ್ತರಣೆಯೊ, ಪುನರ್ ರಚನೆಯೊ ಕೆಲವೇ ದಿನಗಳಲ್ಲಿ ಕಾದು ನೋಡಿ ಎಂದರು.
ನಿಗಮ ಮಂಡಳಿ ಸ್ಥಾಪಿಸಲು ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಂಡು, ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಡುತ್ತಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದರೆ, ಸರ್ಕಾರವೂ ತನ್ನ ಕೆಲಸ ಮಾಡುತ್ತದೆ ಎಂದು ಸೂಚ್ಯವಾಗಿ ಹೇಳಿದರು.
ದಾವಣಗೆರೆ ಜಿಲ್ಲೆಗೂ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಇದೆ. ಸಿಎಂ ಯಡಿಯೂರಪ್ಪ, ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದು ವರಿಷ್ಠರದ್ದೇ ಅಂತಿಮ ತೀರ್ಮಾನ. ಭೌಗೋಳಿಕ, ವಿಸ್ತೀರ್ಣ, ಸಾಮಾಜಿಕ, ಆರ್ಥಿಕತೆ ಸೇರಿ ಎಲ್ಲ ಅಂಶಗಳನ್ನು ಒಳಗೊಂಡಂತೆ ಪ್ರಾಧಾನ್ಯತೆ ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ