ಹೊಸದಿಲ್ಲಿ: ಭಾರತಕ್ಕೆ ಸೇರಿದ ಪ್ರದೇಶಗಳ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಲು ಹವಣಿಸುವ ಕುತಂತ್ರಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್ಎ) ಯುದ್ಧ ತಂತ್ರಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಕ್ಕಾಗಿ ಭಾರತೀಯ ಸೇನೆ ಲಡಾಖ್ನಲ್ಲಿ ಸುರಂಗ ಭದ್ರತೆಗೆ ಗಮನ ನೀಡಿದೆ.
ಶತ್ರುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಾಗೂ ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿಯೂ ಎದುರಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವುದಕ್ಕಾಗಿ ಭಾರತೀಯ ಸೇನೆ ಸುರಂಗಗಳನ್ನು ಅಗೆದು ದೊಡ್ಡ ವ್ಯಾಸದ ಹ್ಯೂಮ್ ಕಾಂಕ್ರೀಟ್ ಪೈಪ್ಗಳನ್ನು ನಿರ್ಮಿಸಿದೆ. ಹೂಮ್ ಕಾಂಕ್ರೀಟ್ ಪೈಪ್ಗಳು 6ರಿಂದ 8 ಅಡಿಗಳಷ್ಟು ವ್ಯಾಸವುಳ್ಳದ್ದಾಗಿದ್ದು, ಶತ್ರುಗಳ ದಾಳಿಯಿಂದ ಸೇನೆ ಒಂದು ಸ್ಥಳದಿಂದ ಮತ್ತೊಂದೆಡೆಗೆ ಸುಲಭವಾಗಿ ತೆರಳಲು ಸಹಕರಿಸಲಿದೆ. ಕೇವಲ ಶತ್ರುಗಳ ದಾಳಿಯಿಂದಷ್ಟೇ ಅಲ್ಲದೆ, ಸುಡು ಬಿಸಿಲು ಹಾಗೂ ಹಿಮಪಾತದಂತಹ ಪ್ರತಿಕೂಲ ಹವಾಮಾನದಿಂದಲೂ ಸೇನೆಯನ್ನು ಈ ಸುರಂಗ ಮಾರ್ಗ ರಕ್ಷಿಸುತ್ತದೆ.
1962ರ ಬಳಿಕ ಇದೇ ಮೊದಲ ಬಾರಿಗೆ ಕೈಲಾಶ್ ಶ್ರೇಣಿಯಲ್ಲಿನ ದಕ್ಷಿಣ ಪ್ಯಾಂಗಾಂಗ್ ತ್ಸೊ ಸರೋವರದ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ) ಪ್ರದೇಶದ ಮೇಲೆ ಕಳೆದ ಆಗಸ್ಟ್ 29-30ರಂದು ವಿಶೇಷ ಮುಂಚೂಣಿ ಪಡೆ (ಎಸ್ಎಫ್ಎಫ್) ಸೇರಿದಂತೆ ಭಾರತೀಯ ಸೇನಾ ಪಡೆಗಳು ತಮ್ಮ ಹಿಡಿತ ಸಾಸಿದ್ದವು. ಆ ಮೂಲಕ ಪಿಎಲ್ಎದ ಇಂಧನ ಶಸ್ತ್ರಾಸ್ತ್ರ ಕುರಿತ ನಕಲಿ ಸುದ್ದಿಯನ್ನು ಸೇನೆ ಈಗಾಗಲೇ ಜಗಜ್ಜಾಹಿರುಗೊಳಿಸಿದೆ.
ಸೇನೆ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯನ್ನಷ್ಟೇ ಭದ್ರಪಡಿಸುವ ಬಗ್ಗೆ ಮಾತ್ರ ಖಾತ್ರಿ ಪಡಿಸುತ್ತಿಲ್ಲ . ಬದಲಿಗೆ ಕೇಂದ್ರೀಯ, ಸಿಕ್ಕಿಂ ಮತ್ತು ಪೂರ್ವ ವಲಯಗಳಲ್ಲಿಯೂ ಸಹ ಪಿಎಲ್ಎ ನಡೆಯ ಮೇಲೆ ತೀವ್ರ ನಿಗಾ ಇರಿಸಿದೆ.