ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಬಿಜೆಪಿ ಸರ್ಕಾರ ಸಿದ್ಧವಿಲ್ಲವೆಂಬ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಸತ್ಯ ಗೊತ್ತಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಪಂ ಚುನಾವಣೆ ವಿಚಾರವಾಗಿ ಕಾಂಗ್ರೆಸ್ಸಿನವರು ಸತ್ಯ ಗೊತ್ತಿಲ್ಲದೇ ಏನೇನೋ ಮಾತನಾಡುತ್ತಿದ್ದಾರೆ. ಗ್ರಾಪಂ, ತಾಪಂ ಎರಡೂ ಚುನಾವಣೆಯಲ್ಲಿ ಒಟ್ಟಿಗೆ ನಡೆಸಬೇಕೆಂಬುದು ಸರ್ಕಾರದ ನಿರ್ಧಾರವಾಗಿತ್ತು. ಜನವರಿ ತಿಂಗಳಲ್ಲಿ ಗ್ರಾಪಂ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ನ್ಯಾಯಾಲಯವೂ ಈಗಾಗಲೇ ಚುನಾವಣೆ ನಡೆಸುವ ಬಗ್ಗೆ ಆದೇಶ ನೀಡಿದೆ. ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದರು.
ಸಚಿವ ಸಂಪುಟ ಪುನಾರಚನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪರಮಾಕಾರ. ಸಂಪುಟ ಪುನಾರಚನೆ, ವಿಸ್ತರಣೆ ವಿಚಾರದ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ಎಂ.ಟಿ.ಬಿ. ನಾಗರಾಜ, ಹೆಚ್. ವಿಶ್ವನಾಥ್, ಮುನಿರತ್ನಗೆ ಸಚಿವ ಸ್ಥಾನದ ಬಗ್ಗೆ ಚರ್ಚಿಸಿಲ್ಲ. 17 ಜನರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಹೊಸದಾಗಿ ಬೇಡಿಕೆ, ಮನವಿ ಸಲ್ಲಿಸುವ ಅಗತ್ಯವೇನೂ ಇಲ್ಲ. ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬುದು ರಾಜಕೀಯದಲ್ಲಿ ದೊಡ್ಡ ಅನುಭವ ಇರುವಂತಹ ಯಡಿಯೂರಪ್ಪನವರಿಗೆ ಗೊತ್ತಿದೆ. ಬಿಎಸ್ವೈ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರವನ್ನೇ ಕೈಗೊಳ್ಳಲಿದ್ದಾರೆ ಎಂದು ಸಮರ್ಥಿಸಿಕೊಂಡರು.