ಬೆಂಗಳೂರು: ಡಾ.ಕಸ್ತೂರಿ ರಂಗನ್ ವರದಿ ಪ್ರಕಾರ ರಾಷ್ಟ್ರೀಯ ಉದ್ಯಾನ ಮತ್ತು ವನ್ಯ ಜೀವಿಧಾಮಗಳ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವ ಸಂಬಂಧ ಸಂಪುಟ ಉಪಸಮಿತಿ ರಚಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
ಕೇಂದ್ರ ಸರ್ಕಾರಕ್ಕೆ ಸೂಕ್ತ ಶಿಫಾರಸು ಸಲ್ಲಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಕಾರ ನೀಡಿದ್ದು, ಅರಣ್ಯ, ಕಂದಾಯ, ಉನ್ನತ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ಗ್ರಾಮಾಭಿವೃದ್ಧಿ, ಪ್ರವಾಸೋದ್ಯಮ ಹಾಗೂ ಕೃಷಿ ಮತ್ತು ರೇಷ್ಮೆ ಸಚಿವರನ್ನು ಒಳಗೊಂಡ ಉಪಸಮಿತಿಯನ್ನೂ ರಚಿಸಿದೆ.
ಗುರುವಾರ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದು, ಸಂಪುಟ ಉಪಸಮಿತಿ ವರದಿ ಆಧರಿಸಿ ಸಿಎಂ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದರೊಂದಿಗೆ ಬೆಳ್ತಂಗಡಿ ತಾಲೂಕಿನಲ್ಲಿ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ತಾಣದ ಸುತ್ತಲಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಸಂಬಂಧ ಕೂಡ ನಿರ್ಣಯ ಆಗಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ಕೆರೆಗೆ ನೀರು, ಹೊಳೆ ದಾಟಲು ಸೇತುವೆ
ಮುಂಡಗೋಡು ತಾಲೂಕಿನ 5 ಗ್ರಾ.ಪಂ.ಗಳ 84 ಸಣ್ಣ ನೀರಾವರಿ ಮತ್ತು ಜಿಲ್ಲಾಪಂಚಾಯತ್ ಬೇಡ್ತಿ ನದಿಯ ಉಪನದಿಯಾದ ಕೆರೆಗಳಿಗೆ ಕವಳಗಿ ಹಳ್ಳದಿಂದ ನೀರು ತುಂಬಿಸುವ ಯೋಜನೆಗೆ 225 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ.
ಪಶ್ಚಿಮ ವಾಹಿನಿ ಯೋಜನೆಯಲ್ಲಿ ಉಡುಪಿಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಪಂ. ವ್ಯಾಪ್ತಿಯ ಮೊಗವೀರಪೇಟೆಯ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಸೇತುವೆ ನಿರ್ಮಾಣಕ್ಕೆ 35 ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮೋದನೆ. ಹಾರಂಗಿ ಜಲಾಶಯದ ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕೆಲಸಕ್ಕೆ 130 ಕೋಟಿ ರೂ. ಅನುದಾನ ನೀಡಿ ನಿರ್ಣಯ ಕೈಗೊಳ್ಳಲಾಗಿದೆ.