ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅವರು ವರದಿ ಸಲ್ಲಿಸಲಿದ್ದಾರೆ.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ವರದಿ ಸಲ್ಲಿಕೆಯಾಗಲಿದ್ದು, ಕೊರೋನಾ ನಂತರ ಶಾಲೆಗಳನ್ನು ಆರಂಭಿಸಬೇಕೇ ಬೇಡವೇ ಎಂಬಿತ್ಯಾದಿ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆಗಳಿವೆ.
ಈಗಾಗಲೇ ಇದಕ್ಕೆ ಸಂಬಂಸಿದಂತೆ ಶಿಕ್ಷಣ ತಜ್ಞರು, ಅಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು,ಪೊಷಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದು, ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ವರದಿ ರೂಪದಲ್ಲಿ ನೀಡಲಿದ್ದಾರೆ.
ಪ್ರಮುಖವಾಗಿ ಕೊರೋನಾ ಹಿನ್ನೆಲೆಯಲ್ಲಿ 2019-20 ನೇ ಶೈಕ್ಷಣಿಕ ವರ್ಷದ ಪರೀಕ್ಷೆ ಮುಗಿಸಿ, ಫಲಿತಾಂಶವನ್ನೂ ನೀಡಿರುವ ಶಿಕ್ಷಣ ಇಲಾಖೆ, 2020-21 ನೇ ಸಾಲಿನ ತರಗತಿಗಳನ್ನು ಆರಂಭಿಸುವ ವಿಚಾರದಲ್ಲಿ ಸಾಕಷ್ಟು ಗೊಂದಲಕ್ಕೊಳಗಾಗಿದೆ.
ವಿದ್ಯಾಗಮದ ಮೂಲಕ ಮಕ್ಕಳಿಗೆ ತರಗತಿಗಳನ್ನು ತೆಗೆದುಕೊಳ್ಳಲಾಗಿತ್ತಾದರೂ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾದ್ದರಿಂದ ಮಧ್ಯಂತರ ರಜೆ ಘೋಷಿಸಿ, ವಿದ್ಯಾಗಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ವಿದ್ಯಾಗಮದ ಮೂಲಕ ಶಿಕ್ಷಣ ನೀಡಬೇಕೇ ಅಥವಾ ಆನ್ಲೈನ್ ಶಿಕ್ಷಣ ಕೊಡಬೇಕೇ ಅಥವಾ ಶಾಲೆಗಳನ್ನೇ ಆರಂಭಿಸಬೇಕೆ ಎಂಬ ಗೊಂದಲವಿದೆ.
9 ರಿಂದ 12 ನೇ ತರಗತಿಗಳು ಆರಂಭ ?
ರಾಜ್ಯದಲ್ಲಿ ಒಂದೆಡೆ ಕೊರೋನಾ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ಇನ್ನೊಂದೆಡೆ 2020-21 ನೇ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳಲು ನಾಲ್ಕು ತಿಂಗಳಷ್ಟೇ ಬಾಕಿ ಇದೆ. ಈ ಹಂತದಲ್ಲಿ ಶಾಲೆಗಳನ್ನು ಆರಂಭಿಸುವುದೇ ಆದರೆ, ಯಾವ ಹಂತದ ತರಗತಿಗಳನ್ನು ನಡೆಸಬೇಕು ? ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ತರಗತಿಗಳನ್ನು ಹೊರತುಪಡಿಸಿ, 9 ರಿಂದ 12 ನೇ ತರಗತಿವರೆಗೆ ತರಗತಿಗಳನ್ನು ನಡೆಸಲು ಅಡ್ಡಿಯಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆಯೇ ಆದರೆ, ಡಿಸೆಂಬರ್ ಮೊದಲ ವಾರದಿಂದಲೇ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಒಲವು ತೋರಿದಂತಿದೆ.