ಹೊಸದಿಲ್ಲಿ: ಲಡಾಖ್ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಉಂಟಾಗಿರುವ ಗಡಿ ಬಿಕ್ಕಟ್ಟು ಬಗೆಹರಿಸಲು ಭಾರತ- ಚೀನಾ ನಡುವೆ 8 ಸುತ್ತಿನ ಮಿಲಿಟರಿ ಹಂತದ ಸಭೆ ನಡೆದಿರುವ ಬೆನ್ನಲ್ಲೇ, ಭಾರತವು ಎಲ್ಎಸಿಯಲ್ಲಿ ಯಾವುದೇ ಬದಲಾವಣೆಯನ್ನು ಒಪ್ಪುವುದಿಲ್ಲ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಅಲ್ಲದೇ ಗಡಿಯಲ್ಲಿ ಚೀನಾ ಇದೇ ರೀತಿಯಾಗಿ ಅಪ್ರಚೋದಿತ ದಾಳಿ ಹಾಗೂ ಕುತಂತ್ರ ಮುಂದುವರಿಸಿದರೆ, ಉಭಯ ರಾಷ್ಟ್ರಗಳ ಮಧ್ಯೆ ಬೃಹತ್ ಬಿಕ್ಕಟ್ಟು ಏರ್ಪಡುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.
ಚೀನಾದೊಂದಿಗೆ ಪೂರ್ಣ ಪ್ರಮಾಣದ ಘರ್ಷಣೆ ಉಂಟಾಗುವ ಸಾಧ್ಯತೆ ಕಡಿಮೆಯಿದ್ದರೂ, ಸದ್ಯ ಗಡಿಯಲ್ಲಿ ಚೀನಾ ಮಾಡುತ್ತಿರುವ ಉದ್ಧಟತನ, ಗಡಿ ನಿಯಮ ಉಲ್ಲಂಘನೆ, ಅಪ್ರಚೋದಿತ ಮಿಲಿಟರಿ ಕ್ರಮಗಳನ್ನು ಒಟ್ಟಾರೆ ಗಮನಿಸಿದರೆ, ಇವೆಲ್ಲವೂ ಉಭಯ ರಾಷ್ಟ್ರಗಳ ನಡುವೆ ಬೃಹತ್ ಬಿಕ್ಕಟ್ಟು ಏರ್ಪಡುವತ್ತ ಬೊಟ್ಟು ಮಾಡುತ್ತಿದೆ ಎಂದು ಹೇಳಬಹುದು ಎಂದಿದ್ದಾರೆ.
ಬೃಹತ್ ಮಟ್ಟದಲ್ಲಿ ಬಿಕ್ಕಟ್ಟು ಉಂಟಾಗಲು ಕೇವಲ ಲಡಾಖ್ ಗಡಿ ವಿಚಾರವೊಂದೇ ಕಾರಣವಾಗುವುದಿಲ್ಲ. ಬದಲಿಗೆ ಚೀನಾ ಉಗ್ರಪೊಷಣೆ ರಾಷ್ಟ್ರ ಪಾಕಿಸ್ಥಾನಕ್ಕೆ ಬೆಂಬಲ ನೀಡುತ್ತಿರುವುದು, ಗಡಿ ಮೂಲಸೌಕರ್ಯ ಅಭಿವೃದ್ಧಿ (ಬಿಆರ್ಐ) ಯೋಜನೆ ಹೆಸರಲ್ಲಿ ಭಾರತಕ್ಕೆ ಸೇರಬೇಕಿರುವ ಪ್ರದೇಶಗಳ ಮೇಲೂ ಅಕಾರ ಸಾಸಲು ಕುತಂತ್ರ ಮಾಡುತ್ತಿರುವುದು, ಪಾಕಿಸ್ಥಾನಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆಮಾಡುತ್ತಿರುವುದು ಎಲ್ಲವೂ ಸೇರಿದೆ ಎಂದು ತಿಳಿಸಿದ್ದಾರೆ.
ಜತೆಗೆ ಚೀನಾ -ಪಾಕಿಸ್ಥಾನ ಒಟ್ಟಾಗಿ ಗಡಿಯಲ್ಲಿ ಪ್ರಾದೇಶಿಕ ಅಸ್ಥಿರತೆ ಉಂಟು ಮಾಡಲು ತಂತ್ರ ಹೆಣೆಯುತ್ತಿದ್ದು, ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಂಭವವಿದೆ ಎಂದು ಹೇಳಿದ್ದಾರೆ.