ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಸಂಬಂಸಿದ ಕೋರ್ಸ್ಗಳಿಗೆ ನ.17ರಿಂದ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು , ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ಅಥವಾ ಆನ್ಲೈನ್ ಮೂಲಕ ಹಾಜರಾಗುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಲಾಗಿದೆ.
ಪದವಿ ಸೇರಿದಂತೆ ವೃತ್ತಿಪರ ಕೋರ್ಸ್ಗಳಿಗೆ ತರಗತಿ ಆರಂಭಿಸುವ ಸಲುವಾಗಿ ಕೈಗೊಂಡ ಸಿದ್ಧತೆಗಳ ಕುರಿತು ಶುಕ್ರವಾರ ಮುಖ್ಯಮಂತ್ರಿಗಳೊಂದಿಗಿನ ಸಭೆ ಬಳಿಕ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳ ತರಗತಿಗಳನ್ನು ನ.17ರಿಂದ ಆರಂಭಿಸಲು ನಿರ್ಧರಿಸಿದೆ. ಎ ಕಾಲೇಜುಗಳು, ಸ್ನಾತಕೋತ್ತರ, ಎಂಜಿನಿಯರಿಂಗ್ ಮತ್ತು ಡಿಪೊಮಾ ಕಾಲೇಜುಗಳಿಗೆ ಇದು ಅನ್ವಯವಾಗಲಿದೆ. ಆದರೆ ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ಅಥವಾ ಆನ್ ಲೈನ್ ಮೂಲಕ ಹಾಜರಾಗುವ ಆಯ್ಕೆ ವಿದ್ಯಾರ್ಥಿಗಳಿಗೆ ಬಿಡಲಾಗಿದೆ ಎಂದರು.
ಪ್ರಾಯೋಗಿಕ ತರಗತಿಗಳಿಗೆ ಭೌತಿಕವಾಗಿ ಹಾಜರಾಗುವುದು ಕಡ್ಡಾಯ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿ ಗಮನದಲ್ಲಿರಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಯಾರು ತರಗತಿಗಳಿಗೆ ಭೌತಿಕವಾಗಿ ಹಾಜರಾಗಲು ಇಚ್ಛಿಸುತ್ತಾರೋ ಅಂತಹ ವಿದ್ಯಾರ್ಥಿಗಳು ಹಾಗೂ ಅವರ ಪೊಷಕರು ಸಂಬಂಸಿದ ಸಂಸ್ಥೆಗೆ ಸಮ್ಮತಿ ಪತ್ರ ನೀಡಿ ಹೆಸರು ನೋಂದಾಯಿಸಬೇಕು ಎಂದರು.
ಪ್ರಮಾಣಿತ ಕಾರ್ಯಾಚರಣಾ ವಿಧಾನ ಶೈಕ್ಷಣಿಕ ಮಾರ್ಗಸೂಚಿಗಳು, ಸಾಮಾನ್ಯ ಮಾರ್ಗಸೂಚಿಗಳು, ಡಿಜಿಟಲ್ ಕಲಿಕಾ ನಿರ್ವಹಣಾ ವ್ಯವಸ್ಥೆ, ಇ-ಪಠ್ಯ, ಡಿಎಲ್ಎಂಎಸ್-ವಿಶ್ಲೇಷಕಗಳು, ಡಿಜಿಟಲ್ ಕಲಿಕೆ ಅನುಷ್ಠಾನಗೊಳಿಸಲು ಬೇಕಾಗುವ ಉಪಕರಣ, ವಿದ್ಯಾರ್ಥಿ ನಿಲಯಗಳ ಆರಂಭ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೇರಿದಂತೆ ಇತರೆ ವಿಷಯಗಳ ಕುರಿತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮುಖ್ಯಮಂತ್ರಿಗಳಿಗೆ ವಿವರಿಸಿದರು.