
ಹೊಸದಿಲ್ಲಿ:ಲಡಾಖ್ ಸೇರಿದಂತೆ ದೇಶದ 5,000 ಗ್ರಾಮಗಳಿಗೆ ಇಸ್ರೋದ ಸಂವಹನ ಉಪಗ್ರಹಗಳನ್ನು ಬಳಸಿ ಅಂತರ್ಜಾಲ ಸೇವೆ ಒದಗಿಸುವುದಾಗಿ ಹ್ಯೂಸ್ ನೆಟ್ವರ್ಕ್ ಸಿಸ್ಟಮ್ಸ್ನ ಅಂಗ ಸಂಸ್ಥೆಯಾದ ಹ್ಯೂಸ್ ಇಂಡಿಯಾ ತಿಳಿಸಿದೆ.
ಇಸ್ರೋದ ಸಂವಹನ ಉಪಗ್ರಹಗಳಾದ ಜಿಸ್ಯಾಟ್-19 ಮತ್ತು ಜಿಸ್ಯಾಟ್-11ನ್ನು ಬಳಸಿ ದೇಶದ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೌಲಭ್ಯವನ್ನು ಒದಗಿಸಲಾಗುವುದು. ಲಡಾಖ್, ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರಾ, ಮಣಿಪುರ, ಛತ್ತೀಸ್ಗಢ, ಜಾರ್ಖಂಡ್, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪಗಳ 5 ಸಾವಿರ ಗ್ರಾಮಗಳಿಗೆ ಅಂತರ್ಜಾಲ ಸೇವೆ ಕಲ್ಪಿಸುವುದಾಗಿ ಹ್ಯೂಸ್ ಇಂಡಿಯಾ ಮಂಗಳವಾರ ಹೇಳಿದೆ.
ಭಾರತ್ ಬ್ರಾಡ್ಬ್ಯಾಂಡ್ ನಿಗಮ ನಿಯಮಿತ (ಬಿಬಿಎನ್ಎಲ್)ನಿಂದ ಗುತ್ತಿಗೆ ಪಡೆದಿರುವ ಹ್ಯೂಸ್ ಇಂಡಿಯಾ, ಕೇಂದ್ರ ಸರ್ಕಾರದ ಭಾರತ್ನೆಟ್ ಯೋಜನೆ ಜಾರಿಗೆ ತರಲು ವಿಶೇಷ ವಾಹನವನ್ನು ತಯಾರಿಸಿದೆ. ಇದರ ಮೂಲಕ ದೇಶಾದ್ಯಂತ 2ರಿಂದ 20 ಎಂಬಿಪಿಎಸ್ ವೇಗದಲ್ಲಿ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಅಂತರ್ಜಾಲ ಸಂಪರ್ಕವನ್ನು ಸಂಸ್ಥೆ ಕಲ್ಪಿಸಲಿದೆ.
ಬಿಬಿಎನ್ಎಲ್ ತಯಾರಿಸಿರುವ ಭಾರತ್ನೆಟ್ ನೆಟ್ವರ್ಕ್, ದೇಶದ ಎಲ್ಲ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ನಾಗರಿಕರಿಗೆ ಹೆಚ್ಚಿನ ವೇಗದ ಬ್ರಾಡ್ಬ್ಯಾಂಡ್ ಸೇವೆಯನ್ನು ಒದಗಿಸಲಿದೆ.
ಬಿಬಿಎನ್ಎಲ್ ತಯಾರಿಸಿರುವ ಭಾರತ್ನೆಟ್ ನೆಟ್ವರ್ಕ್, ದೇಶದ ಎಲ್ಲ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ನಾಗರಿಕರಿಗೆ ಹೆಚ್ಚಿನ ವೇಗದ ಬ್ರಾಡ್ಬ್ಯಾಂಡ್ ಸೇವೆಯನ್ನು ಒದಗಿಸಲಿದೆ. ಮೂಲ ಸೌಕರ್ಯ ವಂಚಿತ ಕುಗ್ರಾಮಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಉಪಗ್ರಹ ಬ್ರಾಡ್ಬ್ಯಾಂಡ್ನ್ನು ಸಂಪರ್ಕಿಸಲು ಟಿಸಿಐಎಲ್ ಮತ್ತು ಹ್ಯೂಸ್ನೊಂದಿಗಿನ ಪಾಲುದಾರಿಕೆ ಸಂತಸ ತಂದಿದೆ ಎಂದು ಬಿಬಿಎನ್ಎಲ್ನ ಪ್ರಧಾನ ನಿರ್ವಹಣಾ ವ್ಯವಸ್ಥಾಪಕ ಸರ್ವೇಶ್ ಸಿಂಗ್ ತಿಳಿಸಿದ್ದಾರೆ.
* ಸೇವೆಗಾಗಿ ಇಸ್ರೋದ ಸಂವಹನ ಉಪಗ್ರಹಗಳಾದ ಜಿಸ್ಯಾಟ್-19 ಮತ್ತು ಜಿಸ್ಯಾಟ್-11ಬಳಕೆ
* ಲಡಾಖ್, ಅರುಣಾಚಲ ಪ್ರದೇಶ, ಮಿಜೋರಾಂ ಸೇರಿ 5 ಸಾವಿರ ಗ್ರಾಮಗಳಿಗೆ ಸೇವೆ