ಕೊಪ್ಪಳ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸುಮಾರು 140 ಹೆಕ್ಟೇರ್ ಕೃಷಿ ಬೆಳೆ, ಹಾಗೂ 830 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಸೇರಿದಂತೆ ಸುಮಾರು ರೂ.4.5 ಕೋಟಿಯಷ್ಟು ಬೆಳೆಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಪ್ರಕಟಣೆಯ ಮೂಲಕ ಜಿಲ್ಲಾಡಳಿತ ತಿಳಿಸಿದ್ದು, ಜಿಲ್ಲೆಯಲ್ಲಿ ವಾಡಿಕೆ ಮಳೆ 5 ಮೀ.ಮೀ. ಆಗಬೇಕಾಗಿದ್ದು, ಈಗ 36 ಮೀ.ಮೀ. ಹೆಚ್ಚಿನ ಮಳೆಯಾಗಿರುತ್ತದೆ. ಕೊಪ್ಪಳ ತಾಲೂಕಿನಲ್ಲಿ 54 ಮೀಮೀ. ಮಳೆ, ಕೂಕನೂರು ತಾಲೂಕಿನಲ್ಲಿ 50 ಮೀ.ಮೀ. ಮಳೆ, ಕುಷ್ಟಗಿ ತಾಲೂಕಿನಲ್ಲಿ 35 ಮೀ.ಮೀ.ಮಳೆಯಾಗಿದೆ. ಇಲ್ಲಿವರೆಗೆ ವಾಡಿಕೆ ಮಳೆ 60 ಮೀ.ಮೀ. ಆಗಬೇಕಾಗಿದ್ದು, 82 ಮೀ.ಮೀ. ವಾಸ್ತವಿಕವಾಗಿ ಹೆಚ್ಚಿನ ಮಳೆಯಾಗಿದೆ. ಅದರಂತೆ ಜಿಲ್ಲೆಯಲ್ಲಿ ಇಲ್ಲಿವರೆಗೂ ವಾಡಿಕೆ ಮಳೆ 525 ಮೀ.ಮೀ. ಆಗಬೇಕಾಗಿದ್ದು, 736 ಮೀ.ಮೀ. ವಾಸ್ತವಿಕವಾಗಿ ಶೇ. 40ರಷ್ಟು ಹೆಚ್ಚಿನ ಮಳೆಯಾಗಿದೆ.
ರೂ. 4.50 ಕೋಟಿ ಬೆಳೆ ಹಾನಿ:
ಶನಿವಾರ ಸುರಿದ ಮಳೆಯಿಂದಾಗಿ ಮೆಕ್ಕೆಜೋಳ, ಹತ್ತಿ, ಭತ್ತ ಸೇರಿದಂತೆ ಸುಮಾರು 140 ಹೆಕ್ಟೇರ್ ಕೃಷಿ ಬೆಳೆಗಳು ಹಾನಿಯಾಗಿದೆ. ಅದರಂತೆ ಬಾಳೆ, ಮೆಣಸಿಕಕಾಯಿ, ಹಾಗೂ ಈರುಳ್ಳಿ, ಬೆಳೆಗಳು ಸೇರಿದಂತೆ 830 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಸುಮಾರು ರೂ.4.50 ಕೋಟಿಯಷ್ಟು ಬೆಳೆಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
140 ಮನೆಗಳ, 1.40 ಕೋಟಿ ರೂ.ಹಾನಿ
2-3 ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 140 ಕಚ್ಚಾ ಮನೆಗಳು ಭಾಗಶ ಹಾನಿಯಾಗಿದೆ. ಕೂಕನೂರು ತಾಲೂಕಿನಲ್ಲಿ 90 ಮನೆಗಳು, ಕೊಪ್ಪಳ ತಾಲೂಕಿನಲ್ಲಿ 20 ಮನೆಗಳು, ಉಳಿದ ಗಂಗಾವತಿ,ಯಲಬುರ್ಗಾ, ಕಾರಟಗಿ, ಕುಷ್ಟಗಿಯಲ್ಲಿ 30 ಮನೆಗಳು ಸೇರಿ 140 ಕಚ್ಚಾ ಮನೆಗಳು ಭಾಗಶ ಹಾನಿಯಾಗಿ ಸುಮಾರು ರೂ. 1.40 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಇದುವರೆಗೂ 744 ಹಾನಿಯಾದ ಮನೆಗಳಿಗೆ 23 ಲಕ್ಷ ಪರಿಹಾರ ಪಾವತಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಬ್ರಿಡ್ಜ್, ತಡಗೋಡೆ ಹಾನಿ:
ಜಿಲ್ಲೆಯಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ತಾಲೂಕಿನ ಕೋಳೂರು ಗ್ರಾಮದ ಬ್ರೀಜ್ ಕಂ ಬ್ಯಾರೇಜ್ , ಭಾಗಶ ಕುಸಿತದಿಂದ ಸುಮಾರು ರೂ. 4 ಕೋಟಿಯಷ್ಟು ಹಾನಿಯಾಗಿದೆ. ಅದರಂತೆ ಕುಷ್ಟಗಿ ತಾಲೂಕಿನ ಚಿಕ್ಕ ಹೆಸರೂರು ಮುದಗಲ್-ಮುಂಡರಗಿ, ರಾಜ್ಯ ಹೆದ್ದಾರಿಯ 129 ಕಿ.ಮೀ. ನಿಂದ 150 ಕಿ.ಮೀ. ರಸ್ತೆ ಪಕ್ಕದ ಹಳ್ಳದ ತಡೆಗೋಡೆ ಕುಸಿತದಿಂದಾಗಿ ಅಂದಾಜು ರೂ. 1.10 ಕೋಟಿ ಹಾನಿಯಾಗಿದ್ದು, ಸೇರಿ ರೂ. 5.10ಕೋಟಿ ರಸ್ತೆ ಬ್ರಿಡ್ಜ್ನಿಂದ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.