ಮಳೆ ತಗ್ಗಿದರೂ ಮುಂದುವರೆದ ಪ್ರವಾಹ ಭೀತಿ

ಹುಬ್ಬಳ್ಳಿ: ಕಳೆದ ನಾಲ್ಕೈದು ದಿನಗಳಿಂದ ಕುಂಭದ್ರೋಣದಂತೆ ಸುರಿಯುತ್ತಿದ್ದ ಮಳೆ ಶುಕ್ರವಾರ ತಗ್ಗಿದ್ದು, ಕೃಷ್ಣಾ ಹಾಗೂ ಭೀಮಾ ತೀರದಲ್ಲಿ ಪ್ರವಾಹ ಭೀತಿ ಮುಂದುವರೆದಿದೆ.
ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿರುವುದಕ್ಕೆ, 5 ಲಕ್ಷ ಕ್ಯೂಸೆಕ್‍ಗಿಂತ ಹೆಚ್ಚು ನೀರು ಉಜನಿ ಜಲಾಶಯದಿಂದ ಭೀಮೆಗೆ ಹರಿ ಬಿಡಲಾಗಿದ್ದು, ಭೀಮಾ ನದಿ ಪಾತ್ರದ ಗ್ರಾಮಗಳ ಜನರು ನಲಗುವಂತಾಗಿದೆ.
ಕೃಷ್ಣಾ ನದಿಗೆ 2.17 ಲಕ್ಷ ಕ್ಯೂಸೆಕ್ ನೀರು
ಯಾದಗಿರಿ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7ರ ಸುಮಾರಿಗೆ ಜಿಲ್ಲೆಯ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.17 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಆಲಿಮಟ್ಟಿ ಜಲಾಶಯದಿಂದ ಸುಮಾರು 2 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಟ್ಟ ಕಾರಣ ನಾರಾಯಣಪೂರದ ಬಸವಸಾಗರ ಜಲಾಶಯದ ಒಳ ಹರಿವು 1.90 ಲಕ್ಷ ಕ್ಯೂಸೆಕ್ ಇದೆ. ಕಾರಣ ಜಲಾಶಯದಿಂದ 29 ಗೇಟುಗಳ ಮೂಲಕ ನದಿಗೆ ಹರಿವಿಡಲಾಗುತ್ತಿದ್ದು ಪ್ರವಾಹ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲೆಯ ಭೀಮಾ ನದಿಯಲ್ಲಿ ಅಪಯಮಟ್ಟ ಮೀರಿ ನೀರು ಹರಿಯುತ್ತಿದ್ದು ಸುಮಾರು 45 ಗ್ರಾಮಗಳಿಗೆ ಜಲಾವೃತದ ಭೀತಿಯನ್ನು ಹುಟ್ಟಿಸಿದೆ.
ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತ
ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣೆ ಈ ಬಾರಿಯೂ ಮುನಿಸಿಕೊಂಡಿದ್ದಾಳೆ. ತನ್ನ ಒಡಲನ್ನು ತುಂಬಿಕೊಂಡು ಉಕ್ಕಿ ಹರಿಯುತ್ತಿದ್ದಾಳೆ. ಇದರಿಂದ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರುವ ಏಕೈಕ ಮಾರ್ಗವಾದ ಉಗಾರ-ಕುಡಚಿ ಮಾರ್ಗದ ಮಧ್ಯದ ಸೇತುವೆಯ ಮೇಲೆ 3 ಅಡಿ ನೀರು ಬಂದಿರುವುದರಿಂದ ಗುರುವಾರ ಮಧರಾತ್ರಿಯಿಂದಲೇ ಸಾರಿಗೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.
ಕೊಟ್ಯಾಂತರ ರೂ. ಬೆಳೆ ನಷ್ಟ
ಸತತ ಮಳೆಗೆ ಬೆಳೆಗಳು ಜಲಾವೃತವಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಪ್ರಮುಖ ಬೆಳೆಗಳಾದ ಭತ್ತ, ಕಬ್ಬು, ಶೇಂಗಾ, ಹತ್ತಿ, ಮೆಕ್ಕೆಜೋಳ ಸಂಪೂರ್ಣ ನೆಲಕಚ್ಚಿದ್ದು, ಕೊಟ್ಯಾಂತರ ರೂ. ನಷ್ಟ ಉಂಟಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ