ತೆಹರಾನ್: ಮೂರು ದಿನಗಳ ಹಿಂದೆ ಇರಾನ್ ನೆಲದಲ್ಲಿ ಉಕ್ರೇನ್ ದೇಶದ ಬೋಯಿಂಗ್ ವಿಮಾನ ಪತನಗೊಂಡು 176 ಮಂದಿ ದುರ್ಮರಣವಪ್ಪಿದ ದುರಂತ ಸಂಭವಿಸಿತ್ತು. ಆ ವಿಮಾನವನ್ನು ಹೊಡೆದುರುಳಿಸಿದ್ದು ತಾನೇ ಎಂದು ಇರಾನ್ ದೇಶ ಒಪ್ಪಿಕೊಂಡಿದೆ. ಮಾನವಸಹಜವಾದ ತಪ್ಪು ಗ್ರಹಿಕೆಯಿಂದ ವಿಮಾನವನ್ನು ಹೊಡೆದುಹಾಕಲಾಯಿತು ಎಂದು ಇರಾನ್ ಸರ್ಕಾರಿ ಟಿವಿಯಲ್ಲಿ ತಿಳಿಸಲಾಗಿದೆ. ಹಾಗೆಯೇ, ಈ ದುರಂತಕ್ಕೆ ಅಮೆರಿಕವೂ ಪರೋಕ್ಷವಾಗಿ ಕಾರಣ ಎಂದು ಇರಾನ್ ಆರೋಪಿಸಿದೆ.
“ಇದು ವಿಷಾದದ ದಿನ. ಅಮೆರಿಕದ ದುಸ್ಸಾಹಸದಿಂದಾಗಿ ಉದ್ಭವಿಸಿದ ಬಿಕ್ಕಟ್ಟಿನ ಘಳಿಗೆಯಲ್ಲಿ ಮಾನವ ಸಹಜ ತಪ್ಪು ನಡೆದಿದೆ. ಇದು ಇರಾನ್ ಸೇನಾ ಪಡೆಯಿಂದ ನಡೆಸಲಾದ ಆಂತರಿಕ ತನಿಖೆಯಲ್ಲಿ ಕಂಡು ಬಂದ ಪ್ರಾಥಮಿಕ ಅಂಶವಾಗಿದೆ. ದುರಂತದಲ್ಲಿ ಮಡಿದ ಎಲ್ಲಾ ವ್ಯಕ್ತಿಗಳ ಕುಟುಂಬಗಳಿಗೂ ನಾವು ಸಾಂತ್ವನ ಹೇಳುತ್ತೇವೆ” ಎಂದು ಇರಾನ್ ವಿದೇಶಾಂಗ ಸಚಿವ ಜಾವೇದ್ ಝಾರಿಫ್ ಟ್ವೀಟ್ ಮಾಡಿದ್ದಾರೆ.
ಇರಾನ್ ದೇಶ ರೆವಲ್ಯೂಷನರಿ ಗಾರ್ಡ್ಸ್ ಎಂಬ ಪ್ರತ್ಯೇಕ ಸೇನಾಪಡೆಯ ಮುಖ್ಯ ಕಮಾಂಡರ್ ಆಗಿದ್ದ, ಹಾಗೂ ಇರಾನ್ ಮುಖ್ಯಸ್ಥ ಅಲಿ ಖಾಮೆನೆಯ್ (Ali Khamenei) ಬಳಿಕ ಇರಾನ್ ದೇಶದ ಅತ್ಯಂತ ಪ್ರಬಲ ಮುಖಂಡರೆನಿಸಿದ್ದ ಖಾಸಿಮ್ ಸುಲೇಮಾನಿ (Qasem Soleimani) ಅವರನ್ನು ಅಮೆರಿಕದ ಪಡೆಗಳು ಸಂಹಾರ ಮಾಡಿದ್ದವು. ಸುಲೇಮಾನಿ ಅವರ ಅಂತ್ಯ ಸಂಸ್ಕಾರಕ್ಕೆ 10 ಲಕ್ಷಕ್ಕೂ ಹೆಚ್ಚು ಇರಾನೀಯರು ಪಾಲ್ಗೊಂಡಿದ್ದರು. ಈ ವೇಳೆ ಇರಾನ್ ದೇಶವು ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಣತೊಟ್ಟಿತ್ತು.
ಅದಾಗಿ ಒಂದು ದಿನಕ್ಕೆ, ಅಂದರೆ ಜ. 8ಕ್ಕೆ ಎರಡು ಪ್ರಮುಖ ಘಟನೆಗಳು ನಡೆದವು. ಇರಾಕ್ ನೆಲದಲ್ಲಿ ಅಮೆರಿಕದ ಪಡೆಗಳಿದ್ದ ಎರಡು ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತು. ನಂತರ, ಉಕ್ರೇನ್ ದೇಶದ ಪ್ರಯಾಣಿಕ ವಿಮಾನವೊಂದು ಇರಾನ್ ನೆಲದಲ್ಲಿ ಪತನಗೊಂಡಿತ್ತು. ರೆವಲ್ಯೂಷನರಿ ಗಾರ್ಡ್ಸ್ ಸೇನಾಪಡೆಗೆ ಸೇರಿದ ಮಿಲಿಟರಿ ಪ್ರದೇಶದ ಸಮೀಪದಲ್ಲೇ ಈ ವಿಮಾನ ಬಿದ್ದು ಎಲ್ಲಾ 176 ಮಂದಿ ಬಲಿಯಾಗಿದ್ದರು. ಸತ್ತವರಲ್ಲಿ ಇರಾನ್ ದೇಶದ 82, ಕೆನಡಾದ 63 ಮತ್ತು ಉಕ್ರೇನ್ನ 11 ಪ್ರಯಾಣಿಕರು ಸೇರಿದ್ದಾರೆ.
ಆರಂಭದಿಂದಲೂ ಇರಾನ್ ತಾನು ಇದನ್ನು ಹೊಡೆದದ್ದಲ್ಲ ಎಂದು ಹೇಳುತ್ತಲೇ ಬಂದಿತ್ತು. ಆದರೆ, ಅಮೆರಿಕ, ಕೆನಡಾ ಮತ್ತು ಬ್ರಿಟನ್ ದೇಶಗಳು ತಮ್ಮ ತಮ್ಮ ಗುಪ್ತಚರ ಮಾಹಿತಿಯನ್ನಾಧರಿಸಿ, ಇರಾನ್ ದೇಶದ ಕ್ಷಿಪಣಿ ದಾಳಿಯಿಂದಲೇ ವಿಮಾನ ಪತನಗೊಂಡಿತು ಎಂದು ಹೇಳಿದ್ದವು. ತಾನು ಹೊಡೆದಿಲ್ಲ ಎಂದು ವಾದಿಸುತ್ತಾ ಬಂದಿದ್ದ ಇರಾನ್ ದೇಶ ಈಗ ಸತ್ಯ ಒಪ್ಪಿಕೊಂಡಿದೆ. ಮಿಲಿಟರಿ ಸೂಕ್ಷ್ಮ ಪ್ರದೇಶಕ್ಕೆ ಈ ವಿಮಾನ ಬಂದಿದ್ದರಿಂದ ಸಾಂದರ್ಭಿಕವಾದ ತಪ್ಪು ಗ್ರಹಿಕೆಯಿಂದ ಅದನ್ನು ಹೊಡೆದುರುಳಿಸಿದೆವು ಎಂದು ಹೇಳಿಕೊಂಡಿದೆ.