ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಇನ್ನಿಲ್ಲ

ಬೆಂಗಳೂರು: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ನಿಧನರಾಗಿದ್ದಾರೆ
ಚಿದಾನಂದಮೂರ್ತಿ 1931 ಮೇ 10ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಹಿರೆಕೊಗಳೂರ್​​ನಲ್ಲಿ ಜನಿಸಿದ್ದರು. ಚಿದಾನಂದಮೂರ್ತಿಯವರಿಗೆ 88 ವರ್ಷ ವಯಸ್ಸಾಗಿತ್ತು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರದಲ್ಲಿ  ಸೇವೆ ಸಲ್ಲಿಸಿರುವ ಚಿದಾನಂದಮೂರ್ತಿಯವರಿಗೆ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಚಿಮೂ ಪ್ರಮುಖರು. ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಚಿದಾನಂದಮೂರ್ತಿ ನಿರಂತರ ಹೋರಾಟ ಮಾಡಿದ್ದರು. ಸಂಶೋಧಕರಾಗಿ ಹಲವು ಸಾಧನೆಗಳನ್ನು ಮಾಡಿದ್ದಾರೆ.  ಪ್ರಾಧ್ಯಾಪಕರಾಗಿಯೂ ಚಿಮೂ  ಸೇವೆ ಸಲ್ಲಿಸಿದ್ದರು.

ಸಾಹಿತಿ ಚಿದಾನಂದಮೂರ್ತಿ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಬೆಳಗ್ಗೆ 9 ಗಂಟೆ ಬಳಿಕ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.  ಆರ್​ಪಿಸಿ ಲೇಔಟ್​​ನಲ್ಲಿ ಚಿಂದಾನಂದಮೂರ್ತಿಯವರ ಮನೆ ಇದೆ.
ಸಾಹಿತಿ ಚಿದಾನಂದಮೂರ್ತಿ ನಿಧನಕ್ಕೆ ಸಚಿವ ಸುರೇಶ್​ಕುಮಾರ್ ಸಂತಾಪ ಸೂಚಿಸಿದ್ದಾರೆ. ಚಿಮೂ ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ. ಹಂಪಿಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದರು. ಕನ್ನಡಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದರು.  ಚಿದಾನಂದಮೂರ್ತಿ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಸಂತಾಪ ಸೂಚಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ